ಚೆನ್ನೈ : 2023ರ ಕ್ಯಾಲೆಂಡರ್ ವರ್ಷವು ಇಸ್ರೊ ಪಾಲಿಗೆ ಬಿಡುವಿಲ್ಲದ ಕಾರ್ಯಾಚರಣೆಯ ವರ್ಷವಾಗಿದೆ. ರಾಕೆಟ್ ಮತ್ತು ಉಪಗ್ರಹಗಳನ್ನು ಉಡಾವಣೆ ಮಾಡುವುದರ ಜೊತೆಗೆ ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಾಗಿ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಇಸ್ರೊ ನಿರಂತರವಾಗಿ ತೊಡಗಿಸಿಕೊಂಡಿದೆ. ಇಸ್ರೊ 2023 ರ ಮೊದಲಾರ್ಧದಲ್ಲಿ ಭಾರತೀಯ ಮತ್ತು ವಿದೇಶಿ ಉಪಗ್ರಹಗಳನ್ನು ಹೊತ್ತ ನಾಲ್ಕು ರಾಕೆಟ್ ಉಡಾವಣೆಗಳನ್ನು ಮಾಡಿದರೆ, ದ್ವಿತೀಯಾರ್ಧದಲ್ಲಿ ಚಂದ್ರಯಾನ-3 ಮಿಷನ್‌ನೊಂದಿಗೆ ಕೆಲಸ ಆರಂಭಿಸಿದೆ.
ಇಸ್ರೊ ಈ ವರ್ಷ ವಾಣಿಜ್ಯ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಈ ತಿಂಗಳ ಕೊನೆಯಲ್ಲಿ ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ ಬೇರೆ ಕಂಪನಿಯ ಉಪಗ್ರಹಗಳನ್ನು ದುಡ್ಡು ಪಡೆದು ಇಸ್ರೊ ಕಕ್ಷೆಗೆ ತಲುಪಿಸಲಿದೆ. ವಾಣಿಜ್ಯ ಕಾರ್ಯಾಚರಣೆಯ ಅಂಗವಾಗಿ ಭಾರತದ ರಾಕೆಟ್ ಸುಮಾರು 360 ಕೆಜಿ ತೂಕದ ಸಿಂಗಾಪುರದ DS-SAR ಉಪಗ್ರಹವನ್ನು ಹೊತ್ತೊಯ್ಯಲಿದೆ. ಜೊತೆಗೆ ಆರು ಇತರ ಸಣ್ಣ ಉಪಗ್ರಹಗಳಾದ VELOX-AM, ARCADE, SCOOB-II, NuLION, Galassia-2 ಮತ್ತು ORB-12 ಸ್ಟ್ರೈಡರ್ ಕೂಡ ಕಕ್ಷೆಗೆ ತಲುಪಲಿವೆ.
ಇದಾದ ನಂತರ ಬರುವುದೇ ಸನ್ ಮಿಷನ್. ಆಗಸ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೊ ತನ್ನ ಆದಿತ್ಯ L1 ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಕಳುಹಿಸಲಿದೆ. ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ರೇಂಜ್ ಪಾಯಿಂಟ್ L1 ಸುತ್ತ ಹಾಲೋ ಕಕ್ಷೆಗೆ ಇರಿಸಲಾಗುತ್ತದೆ ಎಂದು ಇಸ್ರೊ ತಿಳಿಸಿದೆ. L1 ಬಿಂದುವಿನ ಸುತ್ತಲಿನ ಉಪಗ್ರಹವು ಯಾವುದೇ ಅಡೆತಡೆ ಇಲ್ಲದೆ ಸೂರ್ಯ ಮರೆ ಮಾಚದಂತೆ ಮತ್ತು ಗ್ರಹಣದ ಸಮಯದಲ್ಲಿಯೂ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಮುಖ ಪ್ರಯೋಜನವನ್ನು ಈ ಮಿಷನ್ ಹೊಂದಿದೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯಿಂದ ಹೊತ್ತೊಯ್ಯುತ್ತಿರುವ ಲ್ಯಾಂಡರ್ ಅನ್ನು ಚಂದ್ರನ ಮಣ್ಣಿನ ಮೇಲೆ ಇಳಿಸಲು ಪ್ರಯತ್ನಿಸಿದ ಒಂದೆರಡು ದಿನಗಳ ನಂತರ ಆದಿತ್ಯ ಎಲ್ 1 ಮಿಷನ್ ನಡೆಯಲಿದೆ. ಇದರ ನಂತರ ಅನ್ವೇಷ ಉಪಗ್ರಹ ಮತ್ತು XPoSAT ಉಪಗ್ರಹಗಳನ್ನು ಹಾರಿಸಲಾಗುವುದು. XPoSAT ಇದು ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ಜೊತೆಗೆ ಎಕ್ಸ್-ರೇ ಪೋಲಾರಿಮೀಟರ್ ಅನ್ನು ಒಳಗೊಂಡಿರುತ್ತದೆ. ವಿಪರೀತ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲು ಇದು ದೇಶದ ಮೀಸಲಾದ ಪೋಲಾರಿಮೆಟ್ರಿ ಮಿಷನ್ ಆಗಿರುತ್ತದೆ ಎಂದು ಸರ್ಕಾರ ಹೇಳಿದೆ.
ಹಾಗೆಯೇ ಪಿಎಸ್‌ಎಲ್‌ವಿ ರಾಕೆಟ್‌ನಲ್ಲಿ ರಾಡಾರ್ ಇಮೇಜಿಂಗ್ ಉಪಗ್ರಹ-ರಿಸಾಟ್-1ಬಿ ಉಡಾವಣೆಯನ್ನು 2023 ರ ದ್ವಿತೀಯಾರ್ಧದಲ್ಲಿ ಯೋಜಿಸಲಾಗಿದೆ. ಇದಲ್ಲದೆ ಇಸ್ರೊ ತನ್ನ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಜೊತೆಗೆ INSAT-3DS ಮತ್ತು ಎರಡು IDRSS (ಇಂಡಿಯನ್ ಡೇಟಾ ರಿಲೇ ಸ್ಯಾಟಲೈಟ್ ಸಿಸ್ಟಮ್) ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಯೋಜಿಸಿದೆ. ಈ ರಾಕೆಟಿಂಗ್ ಮಿಷನ್‌ಗಳ ಹೊರತಾಗಿ ಇಸ್ರೊ ತನ್ನ ಮೊದಲ ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಾಗಿ LVM3 ರಾಕೆಟ್ ನ ಹೋಗುವ ವಿವಿಧ ವ್ಯವಸ್ಥೆಗಳನ್ನು ಪರೀಕ್ಷಿಸಲಿದೆ.
ಈ ವರ್ಷದಲ್ಲಿ ಹಿಂತಿರುಗಿ ನೋಡಿದರೆ- ಇಸ್ರೊ ಎರಡು ಯಶಸ್ವಿ ವಾಣಿಜ್ಯ ಉಡಾವಣೆಗಳನ್ನು ಮಾಡಿದೆ ಮತ್ತು ರಾಷ್ಟ್ರದ ಮೂರು ಉಪಗ್ರಹಗಳನ್ನು ಹಾರಿಸಿದೆ.
ಮಾರ್ಚ್‌ನಲ್ಲಿ LVM3 ರಾಕೆಟ್‌ನೊಂದಿಗೆ UK ಮೂಲದ OneWeb ಗೆ ಸೇರಿದ 36 ಉಪಗ್ರಹಗಳು ಮತ್ತು ಏಪ್ರಿಲ್‌ನಲ್ಲಿ ಎರಡು ಪಿಗ್ಗಿಬ್ಯಾಕ್ ಪೇಲೋಡ್‌ಗಳೊಂದಿಗೆ TeLEOS-2 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಇವೆರಡೂ ವಾಣಿಜ್ಯ ಕಾರ್ಯಾಚರಣೆಗಳಾಗಿವೆ. ಫೆಬ್ರವರಿಯಲ್ಲಿ ಇಸ್ರೊ ಭೂವೀಕ್ಷಣಾ ಉಪಗ್ರಹ EOS-7 ಅನ್ನು SSLV ರಾಕೆಟ್‌ನೊಂದಿಗೆ, ನ್ಯಾವಿಗೇಷನ್ ಉಪಗ್ರಹ NVS-01 ಅನ್ನು ಏಪ್ರಿಲ್‌ನಲ್ಲಿ GSLV ರಾಕೆಟ್‌ನೊಂದಿಗೆ ಮತ್ತು ಜುಲೈನಲ್ಲಿ LVM3 ರಾಕೆಟ್‌ನೊಂದಿಗೆ ಪ್ರತಿಷ್ಠಿತ ಚಂದ್ರಯಾನ-3 ಮಿಷನ್ ಅನ್ನು ಉಡಾವಣೆ ಮಾಡಿದೆ.