ಹೈದರಾಬಾದ್: ಕೊರೊನಾ ವೈರಸ್ ಸೃಷ್ಟಿಸಿರುವ ಲಾಕ್ಡೌನ್ನಿಂದ ಭೂಮಿಯ ಚಲನೆಯ ಮೇಲೂ ಪರಿಣಾಮವಾಗಿದೆಯಂತೆ. ಲಾಕ್ಡೌನ್ನಿಂದ ಜನಜೀವನದ ಮೇಲೆ ಏನೇ ಪ್ರತಿಕೂಲ ಪರಿಣಾಮಗಳಾಗಿದ್ದರೂ ಪ್ರಕೃತಿಯ ಮೇಲೆ ಮಾತ್ರ ಬಹಳಷ್ಟು ಸಕಾರಾತ್ಮಕ ಪರಿಣಾಮಗಳೇ ಉಂಟಾಗಿವೆ.
ಭೂ ಮೇಲಿನ ಕಂಪನಗಳು ಕಡಿಮೆಯಾದ್ವು:
ಇಡೀ ವಿಶ್ವವೇ ಒಂದು ರೀತಿಯ ಸ್ತಬ್ಧ ಸ್ಥಿತಿಗೆ ಬಂದಿರುವ ಈ ಸಮಯದಲ್ಲಿ ಭೂಮಿಯ ಮೇಲಾಗುತ್ತಿದ್ದ ಕಂಪನಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಇದರಿಂದ ಭೂಚಲನೆಯ ಬಗ್ಗೆ ಮತ್ತಷ್ಟು ಸೂಕ್ಷ್ಮವಾಗಿ ಅಧ್ಯಯನ ಮಾಡಲು ಭೂಕಂಪ ಶಾಸ್ತ್ರಜ್ಞರಿಗೆ ತುಂಬಾ ಅನುಕೂಲವಾಗಿದೆ.
ಭೂಕಂಪ ಶಾಸ್ತ್ರವನ್ನು ಇಂಗ್ಲಿಷಿನಲ್ಲಿ ಸೀಸ್ಮಾಲಜಿ (seismology) ಎಂದು ಕರೆಯಲಾಗುತ್ತದೆ. ಭೂಕಂಪ ಹಾಗೂ ಭೂಕಂಪದ ಅಲೆಗಳ ಕುರಿತು ಅಧ್ಯಯನ ನಡೆಸುವುದು ಭೂಕಂಪ ಶಾಸ್ತ್ರವಾಗಿದೆ. ಭೂಮಿಯ ಹೊರಪದರು ಹೊರಡಿಸುವ ಶಬ್ದಗಳನ್ನು ಸೀಸ್ಮಿಕ್ ನಾಯ್ಸ್ ಎನ್ನುತ್ತಾರೆ.
ಸೀಸ್ಮಿಕ್ ನಾಯ್ಸ್ ಪ್ರಮಾಣ ಇಳಿಕೆ:
ಪ್ರಸ್ತುತ ಕೊರೊನಾ ವೈರಸ್ ಭೀತಿಯಿಂದ ಜಗತ್ತು ಸ್ಥಗಿತ ಸ್ಥಿತಿಗೆ ಬಂದಿದ್ದು, ಎಲ್ಲ ರೀತಿಯ ವಾಹನ ಸಂಚಾರ, ಕಾರ್ಖಾನೆ ಚಟುವಟಿಕೆಗಳು ನಿಂತು ಹೋಗಿದ್ದರಿಂದ ಸೀಸ್ಮಿಕ್ ನಾಯ್ಸ್ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಭೂಕಂಪಶಾಸ್ತ್ರಜ್ಞರು.
ಭೂಮಿಯ ಮೇಲಿನ ಗದ್ದಲ ಕಡಿಮೆಯಾಗಿರುವುದರಿಂದ ಜ್ವಾಲಾಮುಖಿ ಹಾಗೂ ಕಂಪನಗಳ ಕುರಿತು ಅಧ್ಯಯನ ಮಾಡಲು ಸುಲಭವಾಗಿದೆ. ಅಲ್ಲದೆ ಸಣ್ಣ ಪ್ರಮಾಣದ ಭೂಕಂಪಗಳನ್ನು ಗುರುತಿಸಲು ಸಹ ಸಾಧ್ಯವಾಗಲಿದೆ.
ಕಾರ್ಖಾನೆಗಳು, ವಾಹನ ಸಂಚಾರ, ಜನರ ನಿರಂತರ ಚಟುವಟಿಕೆಗಳು ಎಲ್ಲವೂ ಸೇರಿ ಭೂಮಿಯ ಮೇಲೆ ದೊಡ್ಡ ಪ್ರಮಾಣದ ಗದ್ದಲ ಸೃಷ್ಟಿಸುವುದರಿಂದ ಸಣ್ಣ ಪ್ರಮಾಣದ ಭೂಕಂಪಗಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಆದರೆ ಈಗ ಎಲ್ಲವೂ ಪ್ರಶಾಂತವಾಗಿರುವುದರಿಂದ ಯಾವುದೇ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಭೂಕಂಪವಾದರೂ ಅದರ ಸ್ಥಳವನ್ನು ನಿಖರವಾಗಿ ಗುರುತಿಸಲು ಸಾಧ್ಯ ಎಂಬುದು ಭೂಕಂಪಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.