ನವದೆಹಲಿ : ವಿದೇಶಿ ಕಂಪನಿಗಳ ವೆಬ್ ಬ್ರೌಸರ್ಗಳೊಂದಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದೇಶೀಯ ವೆಬ್ ಬ್ರೌಸರ್ ಒಂದನ್ನು ತಯಾರಿಸಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ. ಆತ್ಮನಿರ್ಭರ್ ಭಾರತ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್ ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್, ಒಪೇರಾ ಮತ್ತು ಇತರ ಕಂಪನಿಗಳೊಂದಿಗೆ ಸ್ಪರ್ಧಿಸಬಲ್ಲ, ದೇಶೀಯವಾಗಿ ನಿರ್ಮಿಸಲಾದ ವೆಬ್ ಬ್ರೌಸರ್ಗಳನ್ನು ಬೆಂಬಲಿಸುವ ಕಾರ್ಯಕ್ರಮವನ್ನು ಭಾರತ ಸರ್ಕಾರ ಪ್ರಾರಂಭಿಸಿದೆ.
ವೆಬ್ ಬ್ರೌಸರ್ ಡೆವಲಪ್ಮೆಂಟ್ ಚಾಲೆಂಜ್ಗೆ ಸರ್ಕಾರ ಒಟ್ಟು 3 ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ಅನುದಾನವನ್ನು ಮೀಸಲಾಗಿಟ್ಟಿದೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅದರ ಘಟಕ ಇಲಾಖೆಗಳು ಯೋಜನೆಯ ಮೇಲ್ವಿಚಾರಣೆ ನಡೆಸಲಿವೆ.
"ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಸಾಗುತ್ತಿರುವಾಗ, ನಮ್ಮ ಡಿಜಿಟಲ್ ಭವಿಷ್ಯದ ಮೇಲೆ ನಾವು ನಿಯಂತ್ರಣ ಹೊಂದಿರುವುದು ಮುಖ್ಯ. ನಾಗರಿಕರ ಸುರಕ್ಷತೆಯು ಅತ್ಯುನ್ನತವಾಗಿರುವ ಸಂದರ್ಭಗಳಲ್ಲಿ ವಿದೇಶಿ ವೆಬ್ ಬ್ರೌಸರ್ಗಳನ್ನು ಅವಲಂಬಿಸಲು ನಾವು ಬಯಸುವುದಿಲ್ಲ. ವೆಬ್ ಬ್ರೌಸರ್ಗಳಲ್ಲಿಯೂ ಆತ್ಮನಿರ್ಭರತೆ ಇರಬೇಕು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಗೂಗಲ್ ಮತ್ತು ಮೊಜಿಲ್ಲಾ ಫೈರ್ ಫಾಕ್ಸ್ನಂಥ ಪ್ರಮುಖ ಯುಎಸ್ ಬ್ರೌಸರ್ ಕಂಪನಿಗಳು ತಮ್ಮ 'ಟ್ರಸ್ಟ್ ಸ್ಟೋರ್ಗಳಲ್ಲಿ' ದೇಶದ ವೆಬ್ ಸೆಕ್ಯೂರಿಟಿ ಸರ್ಟಿಫಿಕೇಶನ್ ಅನ್ನು ಸೇರಿಸುವಂತೆ ಒತ್ತಡ ಹೇರಲು ಈ ಕಾರ್ಯಕ್ರಮವು ಸರ್ಕಾರಕ್ಕೆ ಶಕ್ತಿ ನೀಡುತ್ತದೆ ಎಂದು ಸರ್ಕಾರ ನಿರೀಕ್ಷಿಸಿದೆ. ಬ್ರೌಸರ್ ನ ಟ್ರಸ್ಟ್ ಸ್ಟೋರ್ ಅಥವಾ ರೂಟ್ ಸ್ಟೋರ್ ಇದು ಪ್ರಮಾಣೀಕರಣ ಪ್ರಾಧಿಕಾರಗಳ ಪಟ್ಟಿಯನ್ನು ಹೊಂದಿರುತ್ತದೆ. ಇವುಗಳ ಸರ್ಟಿಫಿಕೇಶನ್ಗಳನ್ನು ವಿಶ್ವಾಸಾರ್ಹಗೊಳಿಸಬಹುದು. ಪ್ರಸ್ತುತ, ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್ ಫಾಕ್ಸ್ಗಳಂಥ ಉನ್ನತ ಬ್ರೌಸರ್ಗಳು ತಮ್ಮ ರೂಟ್ ಸ್ಟೋರ್ಗಳಲ್ಲಿ ಭಾರತದ ಅಧಿಕೃತ ಪ್ರಮಾಣೀಕರಣ ಅಥಾರಿಟಿಯನ್ನು ಸೇರಿಸುತ್ತಿಲ್ಲ.
ಸುಮಾರು 850 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾರತದ ಬೃಹತ್ ಇಂಟರ್ನೆಟ್ ಮಾರುಕಟ್ಟೆಯಲ್ಲಿ, ಗೂಗಲ್ ಕ್ರೋಮ್ ಶೇಕಡಾ 88.47 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಸಫಾರಿ ಶೇ 5.22, ಮೈಕ್ರೋಸಾಫ್ಟ್ ಎಡ್ಜ್ ಶೇ 2, ಸ್ಯಾಮ್ ಸಂಗ್ ಇಂಟರ್ನೆಟ್ ಶೇ 1.5, ಮೊಜಿಲ್ಲಾ ಫೈರ್ ಫಾಕ್ಸ್ ಶೇ 1.28 ಮತ್ತು ಇತರ ಬ್ರೌಸರ್ಗಳು ಶೇ 1.53ರಷ್ಟು ಪಾಲಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.
ದೇಶೀಯ ವೆಬ್ ಬ್ರೌಸರ್ಗಳ ಅಭಿವೃದ್ಧಿ ಮತ್ತು ಬಿಡುಗಡೆ 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ದೇಶೀಯ ಸ್ಟಾರ್ಟ್ಅಪ್ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ನಿಗಮಗಳನ್ನು ಕೇಂದ್ರ ಸರ್ಕಾರ ಆಹ್ವಾನಿಸಿದೆ ಮತ್ತು ಬ್ರೌಸರ್ ತಯಾರಿಸುವ ಪ್ರಕ್ರಿಯೆಯುದ್ದಕ್ಕೂ ಸರ್ಕಾರ ಬೆಂಬಲ ನೀಡಲಿದೆ.
ಇದನ್ನೂ ಓದಿ : ಪಿಸಿ, ಲ್ಯಾಪ್ಟಾಪ್ ಲೈಸೆನ್ಸ್ ನಿರ್ಬಂಧದ ಗಡುವು 1 ವರ್ಷ ವಿಸ್ತರಿಸಿ; ಕೇಂದ್ರಕ್ಕೆ ಟೆಕ್ ಕಂಪನಿಗಳ ಮನವಿ