ನವದೆಹಲಿ: ಕನಿಷ್ಠ 5.4 ಮಿಲಿಯನ್ (54 ಲಕ್ಷ) ಟ್ವಿಟರ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಆಂತರಿಕ ಬಗ್ ಒಂದರ ಮೂಲಕ ಕಳವು ಮಾಡಿ, ಆನ್‌ಲೈನ್‌ನಲ್ಲಿ ಲೀಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಟ್ವಿಟರ್ನ ಸ್ವರೂಪ ಬದಲಿಸುವುದಾಗಿ ಎಲೋನ್ ಮಸ್ಕ್ ಹೇಳುತ್ತಿರುವ ಮಧ್ಯೆಯೇ ಇಂಥದೊಂದು ಕಳವಳಕಾರಿ ಘಟನೆ ನಡೆದಿದೆ.
ಆನ್‌ಲೈನ್‌ನಲ್ಲಿ ಮಾರಾಟಕ್ಕಿರುವ 5.4 ಮಿಲಿಯನ್ ದಾಖಲೆಗಳ ಜೊತೆಗೆ, ಬೇರೆ ಟ್ವಿಟರ್ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಬಳಸಿಕೊಂಡು ಹೆಚ್ಚುವರಿ 1.4 ಮಿಲಿಯನ್ ಟ್ವಿಟರ್ ಪ್ರೊಫೈಲ್‌ಗಳನ್ನು ಸಂಗ್ರಹಿಸಲಾಗಿದೆ. ಹಾಗೂ ಇದನ್ನು ಕೆಲವು ಜನರ ನಡುವೆ ಖಾಸಗಿಯಾಗಿ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಬೃಹತ್ ಡೇಟಾವು ಬಚ್ಚಿಡಲಾಗಿದ್ದ ಸಾರ್ವಜನಿಕರ ಮಾಹಿತಿ ಮತ್ತು ಖಾಸಗಿ ಫೋನ್ ಸಂಖ್ಯೆಗಳು, ಇಮೇಲ್ ವಿಳಾಸಗಳನ್ನು ಒಳಗೊಂಡಿದೆ. ಭದ್ರತಾ ತಜ್ಞ ಚಾಡ್ ಲೋಡರ್ ಮೊಟ್ಟ ಮೊದಲಿಗೆ ಟ್ವಿಟರ್‌ನಲ್ಲಿ ಈ ಸುದ್ದಿ ಪ್ರಸಾರ ಮಾಡಿದ್ದರು. ಆದರೆ, ನಂತರ ಕೆಲವೇ ಗಂಟೆಗಳಲ್ಲಿ ಅವರ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಯಿತು.
ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕದಲ್ಲಿ ಲಕ್ಷಾಂತರ ಟ್ವಿಟರ್ ಖಾತೆಗಳ ಮೇಲೆ ಪರಿಣಾಮ ಬೀರುವ ಬೃಹತ್ ಟ್ವಿಟರ್ ಡೇಟಾ ಕಳವಿನ ಪುರಾವೆಗಳು ನನಗೆ ಸಿಕ್ಕಿವೆ. ಕೆಲ ಖಾತೆದಾರರನ್ನು ನಾನು ಸಂಪರ್ಕಿಸಿದ್ದು, ಕಳುವಾದ ಡೇಟಾ ನಿಖರವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಈ ಕಳವಿನ ಪ್ರಕರಣ 2021 ಕ್ಕಿಂತ ಮುಂಚೆಯೇ ಸಂಭವಿಸಿದೆ ಎಂದು ಲೋಡರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಈ ವರ್ಷದ ಜನವರಿಯಲ್ಲಿ ಟ್ವಿಟರ್ ಎಪಿಐನ ದುರ್ಬಲತೆ ಪರಿಹಾರ ಬಳಸಿಕೊಂಡು ಸಾರ್ವಜನಿಕವಾಗಿ ಲಭ್ಯವಿರದ ಮಾಹಿತಿಯನ್ನು ಹೊಂದಿರುವ ಡೇಟಾವನ್ನು ಕದಿಯಲಾಗಿದೆ. ಟ್ವಿಟರ್ ಎಪಿಐ ದುರ್ಬಲತೆ ಬಳಸಿಕೊಂಡು ಡಿಸೆಂಬರ್ 2021 ರಲ್ಲಿ ಈ ಡೇಟಾ ಸಂಗ್ರಹಿಸಲಾಗಿದೆ ಎಂದು ಹ್ಯಾಕರ್‌ಒನ್ ಬಗ್ ಬೌಂಟಿ ಪ್ರೋಗ್ರಾಂನಲ್ಲಿ ಬಹಿರಂಗಪಡಿಸಿದ ವರದಿ ಭಾನುವಾರ ತಿಳಿಸಿದೆ. ಹೆಚ್ಚಿನ ಡೇಟಾವು ಟ್ವಿಟರ್ ಐಡಿಗಳು, ಹೆಸರು, ಲಾಗಿನ್ ಹೆಸರು, ಸ್ಥಳಗಳು ಮತ್ತು ವೆರಿಫೈಡ್ ಮಾಹಿತಿಯಂಥ ಸಾರ್ವಜನಿಕ ಮಾಹಿತಿಯನ್ನು ಒಳಗೊಂಡಿದೆ.
ಇದು ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳಂತಹ ಖಾಸಗಿ ಮಾಹಿತಿಯನ್ನು ಸಹ ಒಳಗೊಂಡಿದೆ. ವರದಿಯ ಕುರಿತು ಮಸ್ಕ್ ಅಥವಾ ಟ್ವಿಟರ್ ಇನ್ನೂ ಕಮೆಂಟ್ ಮಾಡಿಲ್ಲ. ಹ್ಯಾಕರ್‌ಗಳು ಆನ್‌ಲೈನ್‌ನಲ್ಲಿ 5.4 ಮಿಲಿಯನ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಗಯೇ ಅದೇ ದುರ್ಬಲತೆಯನ್ನು ಬಳಸಿಕೊಂಡು ಇನ್ನೂ ದೊಡ್ಡ ಡೇಟಾ ಡಂಪ್ ಅನ್ನು ರಚಿಸಲಾಗಿದೆ ಎಂದು ವರದಿ ಹೇಳಿದೆ.
(ಈ ಸುದ್ದಿಯನ್ನು ಸಿಂಡಿಕೇಟೆಡ್ ಫೀಡ್‌ನಿಂದ ತೆಗೆದುಕೊಳ್ಳಲಾಗಿದೆ)
ಇದನ್ನೂ ಓದಿ: ಬೆಂಗಳೂರಲ್ಲಿ 'ವೈಫ್ ಗಿವಿಂಗ್' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್ ಮಾಡ್ತಿದ್ದ ಪತಿ!