ಜಿನೀವಾ : 2023ರಲ್ಲಿ ವಿಶ್ವದ ಒಟ್ಟಾರೆ ಶೇ 33ರಷ್ಟು ಜನಸಂಖ್ಯೆ ಈವರೆಗೂ ಇಂಟರ್ನೆಟ್ನಿಂದ ಸಂಪರ್ಕಿತವಾಗಿಲ್ಲ ಎಂದು ವಿಶ್ವಸಂಸ್ಥೆಯ ಟೆಕ್ ಏಜೆನ್ಸಿ ಐಟಿಯುನ ಇತ್ತೀಚಿನ ಅಂಕಿಅಂಶಗಳು ಮಂಗಳವಾರ ತಿಳಿಸಿವೆ. ಅಂದರೆ, ಈ ಶೇ 33 ರಷ್ಟು ಜನ ಇನ್ನೂ ಆಫ್ಲೈನ್ ಆಗಿದ್ದಾರೆ ಎಂದರ್ಥ. 2022 ರಲ್ಲಿ ಅಂದಾಜು 2.7 ಬಿಲಿಯನ್ ಜನ ಆಫ್ಲೈನ್ ಆಗಿದ್ದರು. ಈ ಸಂಖ್ಯೆ 2023 ರಲ್ಲಿ ಅಂದಾಜು 2.6 ಬಿಲಿಯನ್ ಅಥವಾ ಶೇಕಡಾ 33 ಕ್ಕೆ ಇಳಿದಿದೆ. 2023 ರ ವೇಳೆಗೆ ವಿಶ್ವದ ಜನಸಂಖ್ಯೆಯ ಕೇವಲ 67 ಪ್ರತಿಶತದಷ್ಟು ಅಥವಾ 5.4 ಬಿಲಿಯನ್ ಜನರು ಮಾತ್ರ ಆನ್ ಲೈನ್‌ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
"ಸಂಪರ್ಕದಲ್ಲಿನ ಈ ಸುಧಾರಣೆಯು ಸರಿಯಾದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುವಲ್ಲಿ ಯಾರನ್ನೂ ಹಿಂದೆ ಬಿಡದ ಮತ್ತೊಂದು ಕ್ರಮವಾಗಿದೆ" ಎಂದು ಐಟಿಯು ಪ್ರಧಾನ ಕಾರ್ಯದರ್ಶಿ ಡೊರೀನ್ ಬೊಗ್ಡಾನ್-ಮಾರ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಅರ್ಥಪೂರ್ಣ ಸಂಪರ್ಕವು ಎಲ್ಲರಿಗೂ, ಎಲ್ಲೆಡೆಯೂ ಸಿಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ" ಎಂದು ಬೊಗ್ಡಾನ್-ಮಾರ್ಟಿನ್ ಹೇಳಿದರು.
ಆರಂಭಿಕ ಅಂದಾಜಿನ ಪ್ರಕಾರ, ಕಡಿಮೆ ಆದಾಯದ ದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ಬೆಳವಣಿಗೆಯು ಪ್ರಬಲವಾಗಿದೆ. ಈ ದೇಶಗಳಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಳೆದ ವರ್ಷದಲ್ಲಿ ಸುಮಾರು 17 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಡೇಟಾ ತಿಳಿಸಿದೆ. ಆದಾಗ್ಯೂ, ಈ ದೇಶಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಜನರು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದ 2020 ರ ಉತ್ತುಂಗದಲ್ಲಿ ಕಂಡು ಬಂದಿದ್ದ ಇಂಟರ್ನೆಟ್ ಸಂಪರ್ಕದಲ್ಲಿನ ಎರಡಂಕಿ ಬೆಳವಣಿಗೆಯು ಅಲ್ಪಾವಧಿಯದ್ದಾಗಿತ್ತು ಎಂದು ಇತ್ತೀಚಿನ ಜಾಗತಿಕ ಅಂದಾಜುಗಳು ದೃಢಪಡಿಸಿವೆ. ಪ್ರಸ್ತುತ ಪ್ರವೃತ್ತಿಗಳು 2030 ರ ವೇಳೆಗೆ ಸಾರ್ವತ್ರಿಕ ಮತ್ತು ಅರ್ಥಪೂರ್ಣ ಇಂಟರ್ನೆಟ್ ಸಂಪರ್ಕದ ಉದ್ದೇಶವನ್ನು ಪೂರೈಸಲಾಗುವುದು ಎಂದು ಖಾತರಿಪಡಿಸುವಷ್ಟು ಪ್ರಬಲವಾಗಿಲ್ಲ.
ಪೆನ್ ಈ ಜಗತ್ತಿನಲ್ಲಿ ಅತ್ಯಂತ ಪ್ರಮುಖ ಸಾಧನವಾಗಿದ್ದ ದಿನಗಳು ಕಳೆದುಹೋಗಿವೆ. ಕಾಲ ಬದಲಾಗಿದೆ ಮತ್ತು ಈಗ ಇಂಟರ್ನೆಟ್ ಜಗತ್ತನ್ನು ಆಳುತ್ತಿದೆ. ಇಂಟರ್ನೆಟ್ ದೈನಂದಿನ ಜೀವನಕ್ಕೆ ಅಗತ್ಯವಾದ ಪ್ರಮುಖ ಸೇವೆಗಳು ಮತ್ತು ಸಂಪನ್ಮೂಲಗಳ ಸಂಗ್ರಹವನ್ನು ನೀಡುತ್ತದೆ. ಅಂತರ್ಜಾಲವನ್ನು ಬಳಸುವ ಮೂಲಕ, ಜನರು ಜೀವನದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.
ಇದು ಕಂಪ್ಯೂಟರ್ ನೆಟ್ವರ್ಕ್ನ ವಿಶ್ವವ್ಯಾಪಿ ಸಂಸ್ಥೆಯಾಗಿರುವುದರಿಂದ, ಇದರ ಮೂಲಕ ಎಲ್ಲೆಡೆಯ ಜನರನ್ನು ಸಂಪರ್ಕಿಸಬಹುದು ಮತ್ತು ಸಮುದಾಯಗಳನ್ನು ರಚಿಸಬಹುದು. ಇದು ಮಾಹಿತಿಯನ್ನು ಒದಗಿಸುವ ಮತ್ತು ಬಳಸುವ ಉತ್ತಮ ಮಾರ್ಗವಾಗಿದೆ ಮತ್ತು ಇದು ಪ್ರಪಂಚದಾದ್ಯಂತ ಲಭ್ಯವಿದೆ. ಇಂಟರ್ನೆಟ್ ಈಗ ನಿಮ್ಮ ಕಂಪ್ಯೂಟರ್ ಪರದೆಗಳಲ್ಲಿ ಲಭ್ಯವಿದ್ದು, ಇದು ಜಗತ್ತನ್ನು ಚಿಕ್ಕದಾಗಿಸಿದೆ.
ಇದನ್ನೂ ಓದಿ : ಸಾಲ ತೀರಿದ 30 ದಿನಗಳಲ್ಲಿ ಮೂಲ ದಾಖಲೆ ಮರಳಿಸದಿದ್ದರೆ ದಿನಕ್ಕೆ 5 ಸಾವಿರ ರೂ. ದಂಡ: ಆರ್ಬಿಐ ಹೊಸ ನಿಯಮ