ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿಗಳಾದ ಫೇಸ್ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಟಿಕ್ ಟಾಕ್, ಎಕ್ಸ್ ಮತ್ತು ಯೂಟ್ಯೂಬ್ ಒಟ್ಟಾಗಿ 2022ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುಎಸ್ ಮೂಲದ ಬಳಕೆದಾರರಿಂದ ಸುಮಾರು 11 ಬಿಲಿಯನ್ ಡಾಲರ್ ಜಾಹೀರಾತು ಆದಾಯ ಗಳಿಸಿವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಹಾರ್ವರ್ಡ್ ಟಿ.ಎಚ್.ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಇದರಲ್ಲಿ ಸಂಶೋಧಕರು ಫೇಸ್ಬುಕ್, ಇನ್ ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಟಿಕ್ ಟಾಕ್, ಎಕ್ಸ್ (ಹಿಂದೆ ಟ್ವಿಟರ್) ಮತ್ತು ಯೂಟ್ಯೂಬ್ಗಳ ಯುವ ಬಳಕೆದಾರರ ಸಂಖ್ಯೆ ಮತ್ತು ಸಂಬಂಧಿತ ಜಾಹೀರಾತು ಆದಾಯವನ್ನು ಸಮಗ್ರವಾಗಿ ಅಂದಾಜು ಮಾಡಲು 2021 ಮತ್ತು 2022 ರಲ್ಲಿನ ವಿವಿಧ ಸಾರ್ವಜನಿಕ ಸಮೀಕ್ಷೆ ಮತ್ತು ಮಾರುಕಟ್ಟೆಗಳ ಸಂಶೋಧನಾ ಮಾಹಿತಿಯನ್ನು ಬಳಸಿದ್ದಾರೆ.
"ಯುವಜನತೆಯ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರಗಳು ಯುವಜನರಲ್ಲಿ ಖಿನ್ನತೆ, ಆತಂಕ ಮತ್ತು ಅಸ್ವಸ್ಥ ಆಹಾರ ಸೇವನೆಯ ಅಭ್ಯಾಸವನ್ನುಂಟು ಮಾಡುವ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಅಭ್ಯಾಸಗಳನ್ನು ಕಡಿಮೆಗೊಳಿಸಲು ಕಾಯ್ದೆ ಜಾರಿಗೆ ಪ್ರಯತ್ನಿಸುತ್ತಿದ್ದಾರೆ" ಎಂದು ಹಿರಿಯ ಸಂಶೋಧಕ ಮತ್ತು ಸಾಮಾಜಿಕ ಮತ್ತು ನಡವಳಿಕೆ ವಿಜ್ಞಾನಗಳ ವಿಭಾಗದ ಪ್ರಾಧ್ಯಾಪಕ ಬ್ರೈನ್ ಆಸ್ಟಿನ್ ಹೇಳಿದ್ದಾರೆ.
"ಯುವಜನತೆಯ ಮೇಲೆ ದುಷ್ಪರಿಣಾಮ ಕಡಿಮೆ ಮಾಡಲು ತಾವು ಸ್ವತಃ ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಹೇಳಿಕೊಂಡರೂ ಅವು ಹಾಗೆ ಮಾಡಿಲ್ಲ. ಮಕ್ಕಳ ವಯಸ್ಸಿನ ಬಳಕೆದಾರರಿಂದ ಅವರಿಗೆ ಹೇರಳ ಹಣಕಾಸು ಆದಾಯ ಬರುತ್ತಿರುವುದರಿಂದಲೇ ಅವರು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ" ಎಂದು ಅವರು ತಿಳಿಸಿದರು.
2022ರಲ್ಲಿ ಯೂಟ್ಯೂಬ್ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 49.7 ಮಿಲಿಯನ್, ಟಿಕ್ಟಾಕ್ 18.9 ಮಿಲಿಯನ್, ಸ್ನ್ಯಾಪ್ಚಾಟ್ (18 ಮಿಲಿಯನ್), ಇನ್‌ಸ್ಟಾಗ್ರಾಮ್ (16.7 ಮಿಲಿಯನ್), ಫೇಸ್ಬುಕ್ (9.9 ಮಿಲಿಯನ್) ಮತ್ತು ಎಕ್ಸ್ (7 ಮಿಲಿಯನ್) ಬಳಕೆದಾರರನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಪ್ಲಾಟ್ಫಾರ್ಮ್ಗಳು ಒಟ್ಟಾಗಿ ಈ ಬಳಕೆದಾರರಿಂದ ಸುಮಾರು $ 11 ಬಿಲಿಯನ್ ಜಾಹೀರಾತು ಆದಾಯ ಗಳಿಸಿವೆ. 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಂದ $ 2.1 ಬಿಲಿಯನ್ ಮತ್ತು 13 ರಿಂದ 17 ವಯಸ್ಸಿನ ಬಳಕೆದಾರರಿಂದ $ 8.6 ಬಿಲಿಯನ್ ಆದಾಯ ಅವುಗಳಿಗೆ ಬಂದಿದೆ.
ಯೂಟ್ಯೂಬ್ 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಂದ 959.1 ಮಿಲಿಯನ್ ಡಾಲರ್, ಇನ್‌ಸ್ಟಾಗ್ರಾಮ್ 801.1 ಮಿಲಿಯನ್ ಡಾಲರ್ ಮತ್ತು ಫೇಸ್ಬುಕ್ 137.2 ಮಿಲಿಯನ್ ಡಾಲರ್ ಗಳಿಸಿವೆ. ಇನ್‌ಸ್ಟಾಗ್ರಾಮ್ 13 ರಿಂದ 17 ವರ್ಷ ವಯಸ್ಸಿನ ಬಳಕೆದಾರರಿಂದ ಹೆಚ್ಚಿನ ಜಾಹೀರಾತು ಆದಾಯ ಪಡೆದುಕೊಂಡಿದೆ (4 ಬಿಲಿಯನ್ ಡಾಲರ್). ನಂತರದ ಸ್ಥಾನದಲ್ಲಿ ಟಿಕ್ಟಾಕ್ (2 ಬಿಲಿಯನ್ ಡಾಲರ್) ಮತ್ತು ಯೂಟ್ಯೂಬ್ (1.2 ಬಿಲಿಯನ್ ಡಾಲರ್) ಇವೆ ಎಂದು ಅಧ್ಯಯನ ತಿಳಿಸಿದೆ.
ಸ್ನ್ಯಾಪ್ಚಾಟ್ ತನ್ನ ಒಟ್ಟಾರೆ 2022 ರ ಜಾಹೀರಾತು ಆದಾಯದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಂದ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ (41 ಪ್ರತಿಶತ). ನಂತರದ ಸ್ಥಾನದಲ್ಲಿ ಟಿಕ್ಟಾಕ್ (35 ಶೇಕಡಾ), ಯೂಟ್ಯೂಬ್ (27 ಶೇಕಡಾ) ಮತ್ತು ಇನ್‌ಸ್ಟಾಗ್ರಾಮ್ (16 ಶೇಕಡಾ) ಇವೆ ಎಂದು ಸಂಶೋಧಕರು ಲೆಕ್ಕಹಾಕಿದ್ದಾರೆ.
ಇದನ್ನೂ ಓದಿ: ಚಂದ್ರನ ಮೊದಲ ಚಿತ್ರ ಕಳುಹಿಸಿದ ಜಪಾನ್ನ SLIM ಬಾಹ್ಯಾಕಾಶ ನೌಕೆ