ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿ ಹೆಚ್ಚಿನ ಮಟ್ಟದ ಸಾಮಾಜಿಕ ಪರಿವರ್ತನೆ ಕಂಡುಬಂದಿದೆ. ಸಾಮಾಜಿಕ ಒಳಗೊಳ್ಳುವಿಕೆ, ಸಾಮಾಜಿಕ ನೈತಿಕತೆ ಹಾಗೂ ಕಠಿಣ ದೃಷ್ಟಿಕೋನಗಳು ಹಿಂದಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದರೂ ಸಹ, ಲೈಂಗಿಕ ಶಿಕ್ಷಣದ ವಿಷಯದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳು ಆಗಬೇಕಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳಷ್ಟೇ ಸ್ಥಗಿತವಾಗಿಲ್ಲ, ಇದುವರೆಗೆ ಲೈಂಗಿಕ ಶಿಕ್ಷಣವು ಎಷ್ಟರ ಮಟ್ಟಿಗೆ ಲಭ್ಯವಿತ್ತೋ ಅದು ಕೂಡಾ ಸಿಗದಂತೆ ಆಗಿಬಿಟ್ಟಿದೆ. ಕಲಿಕೆಯಲ್ಲಿ ಅವಶ್ಯಕವಾಗಿರುವ ಶಿಕ್ಷಕ - ವಿದ್ಯಾರ್ಥಿ ಮತ್ತು ಶಿಕ್ಷಕ - ತರಗತಿಗಳ ನಡುವಿನ ಸಂವಹನ ಬಹುತೇಕ ಸ್ಥಗಿತಗೊಂಡಿದೆ. ಬಹುತೇಕ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಈಗ ಬೋಧನೆಯ ಸಮಯದಲ್ಲಿ ಅವರು ಕೇವಲ ಮೊಬೈಲ್ ಪರದೆ ಮಾತ್ರ ನೋಡಬೇಕಾಗಿದ್ದು, ನೈಜವಾದ ಕಲಿಕೆ ಸಾಧ್ಯವಾಗದೇ ಆತಂಕ ಮತ್ತು ಒತ್ತಡವನ್ನು ಅನುಭವಿಸುತ್ತಿದ್ದಾರೆ.
ಗೆಳೆಯ-ಗೆಳತಿಯರು ಪರಸ್ಪರ ಸಂವಹನ ಹಾಗೂ ಹಂಚಿಕೊಳ್ಳುವ ಮೂಲಕ ಹೊಸತನವನ್ನು ಗ್ರಹಿಸುತ್ತಿದ್ದ ಸಾಧ್ಯತೆಗಳು ಈಗ ತೀರಾ ಕಡಿಮೆಯಾಗಿದ್ದು, ಅದರಲ್ಲಿಯೂ ಹದಿಹರೆಯದವರು ಈ ದೈಹಿಕ ಉಪಸ್ಥಿತಿಯ ಅಲಭ್ಯತೆಯಿಂದ ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ಇದು ಒಂದು ಸಮಸ್ಯೆಯಾದರೆ, ಬಹುತೇಕ ಎಲ್ಲರೂ ಈಗ ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಅಂತರ್ಜಾಲದಲ್ಲಿ ಬೆದರಿಕೆ ಹಾಗೂ ಕಿರುಕುಳವನ್ನು ಎದುರಿಸುವ ಅಪಾಯ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಶಿಕ್ಷಣಕ್ಕೆ ಸೂಕ್ತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳದೇ ಹೋದರೆ, ಈ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗುತ್ತದೆ.
ವೇಗದ ಇಂಟರ್ನೆಟ್ ಸಂಪರ್ಕ ಮತ್ತು ಸಾಂಕ್ರಾಮಿಕ ರೋಗ ತಂದಿಟ್ಟಿರುವ ಮನೆಯಲ್ಲಿಯೇ ಅಧ್ಯಯನ ಮಾಡಬೇಕಾದ ಈ ಕಾಲದಲ್ಲಿ, ಲೈಂಗಿಕ ಶಿಕ್ಷಣದ ನಿಭಾಯಿಸುವಿಕೆ ಹಾಗೂ ವಿಧಾನ - ಎರಡರಲ್ಲೂ ಬದಲಾವಣೆ ಇರಬೇಕಿದೆ. ಸದ್ಯ ನಮ್ಮ ಪರಿಸರದಲ್ಲಿರುವ ಸಾಂಪ್ರದಾಯಿಕ ವಿಧಾನದಲ್ಲಿರುವ ಮೌಢ್ಯತೆಯ ಕುಂದುಗಳನ್ನು ಸರಿಪಡಿಸುವ ಮೂಲಕ ಲೈಂಗಿಕ ಶಿಕ್ಷಣವನ್ನು ನಿಜವಾಗಿಯೂ ಒಳಗೊಳ್ಳುವಂತಹ, ಪ್ರಗತಿಪರ ಹಾಗೂ ಲಿಂಗ-ತಟಸ್ಥವಾಗಿಸಬೇಕಿದೆ.
ಲೈಂಗಿಕ ಶಿಕ್ಷಣದ ವಿಷಾದಕರ ಕೊರತೆಯಿಂದಾಗಿ ದೇಶದ ಹೆಚ್ಚಿನ ಭಾಗಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೈಹಿಕ ಸ್ವಾಯತ್ತತೆಯ ಉಲ್ಲಂಘನೆ ಬಗ್ಗೆ ತಿಳಿದಿಲ್ಲ. ಒಪ್ಪಿಗೆ, ಉಲ್ಲಂಘನೆ ಮತ್ತು ಅತ್ಯಾಚಾರದ ನಡುವಿನ ಅಂತರ ಅರ್ಥವಾಗುವುದಿಲ್ಲ, ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಸಾಮಾಜಿಕ ಕಳಂಕವು ಅವನ್ನು ಮುಚ್ಚಿಡುವಂತೆ ಮಾಡುತ್ತದೆ. ಇದರಿಂದಾಗಿ ಅಪರಾಧಿಗಳು ಇನ್ನಷ್ಟು ಧೈರ್ಯ ಹೊಂದುವಂತಾಗಿದೆ. ಯುನಿಸೆಫ್ ಮತ್ತು ಪ್ರಯಾಸ್ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಭಾರತೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಡೆಸಿದ ಅಧ್ಯಯನದ ಪ್ರಕಾರ, 5 ರಿಂದ 12 ವರ್ಷದೊಳಗಿನ 53% ಮಕ್ಕಳು ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿ. ಬಹುತೇಕ ಪ್ರಕರಣಗಳಲ್ಲಿ, ಅಪರಾಧಿಗಳು ಸಂತ್ರಸ್ತರ ಹತ್ತಿರದ ಸಂಬಂಧಿಗಳಾಗಿರುತ್ತಾರೆ. ಹಾಗೂ ಈ ಎಲ್ಲಾ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗದೇ ಹೋಗುತ್ತವೆ.
ವಿಶಾಲ ದೃಷ್ಟಿಕೋನದ ಅವಶ್ಯಕತೆ:
ಭಾರತದಲ್ಲಿ ಲೈಂಗಿಕ ಶಿಕ್ಷಣವನ್ನು ಬಹುತೇಕವಾಗಿ ಹದಿಹರೆಯದ ಗರ್ಭಧಾರಣೆ ಮತ್ತು ಎಚ್ಐವಿ / ಏಡ್ಸ್‌ಗೆ ಸಮಾನ ಎಂಬಂತೆ ಪರಿಗಣಿಸಲಾಗುತ್ತದೆ. ಮುಟ್ಟನ್ನು ಅರ್ಥೈಸುವುದು ಸಹ ಬಹುತೇಕ ಹೀಗೆಯೇ. ಹೀಗಾಗಿ ಈ ವಿಷಯ ಕುರಿತಂತೆ ಇನ್ನಷ್ಟು ವಿಶಾಲವಾದ ತಿಳಿವಳಿಕೆ ಬೇಕಿದ್ದು, ಲಿಂಗ ಗುರುತಿಸುವಿಕೆ, ದೃಷ್ಟಿಕೋನ ಮತ್ತು ವೈವಿಧ್ಯತೆಗೆ ಅನುಗುಣವಾಗಿ ಇದನ್ನು ಸಾಧಿಸುವ ಅವಶ್ಯಕತೆಯಿದೆ.
ಮತ್ತೊಂದು ವಿಷಯವೆಂದರೆ, ಒಮ್ಮತದ ಹೊರತಾಗಿಯೂ ಮತ್ತು ಒಂದು ವಿಷಯವಾಗಿ ಇದು ಕಡ್ಡಾಯವಾಗಿದ್ದರೂ ಸಹ, ತಮ್ಮ ಪಠ್ಯಕ್ರಮದಲ್ಲಿ ಯಾವುದೇ ರೀತಿಯ ಲೈಂಗಿಕ ಶಿಕ್ಷಣವನ್ನು ಹೊಂದಿರದ ಸಾಕಷ್ಟು ಶಾಲೆಗಳು ಮತ್ತು ಇತರ ಸಂಸ್ಥೆಗಳು ಇನ್ನೂ ಸಾಕಷ್ಟಿವೆ. ‘ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಯುವ ಒಕ್ಕೂಟ’ ದ ವರದಿಯ ಪ್ರಕಾರ, ರಾಜ್ಯಗಳ ಪ್ರೌಢ ಶಿಕ್ಷಣ ಮಂಡಳಿಯೊಂದಿಗೆ ಸಂಲಗ್ನವಾಗಿರುವ ಬಹುತೇಕ ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ಯಾವುದೇ ರೀತಿಯ ಲೈಂಗಿಕ ಶಿಕ್ಷಣವನ್ನು ಹೊಂದಿಲ್ಲ’.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಸಹಯೋಗದೊಂದಿಗೆ ಭಾರತ ಸರ್ಕಾರವು ‘ಹದಿಹರೆಯದ ಶಿಕ್ಷಣ ಕಾರ್ಯಕ್ರಮ’ವನ್ನು (ಎಇಪಿ - ಅಡೊಲೊಸೆಂಟ್ ಎಜುಕೇಶನ್ ಪ್ರೋಗ್ರಾಂ) 2007ರಲ್ಲಿ ಪ್ರಾರಂಭಿಸಿತು. ಅದೇ ವರ್ಷ ಸರ್ಕಾರ ಇದನ್ನು ಎಲ್ಲಾ ರಾಜ್ಯಗಳಲ್ಲಿಯೂ ಪ್ರಾರಂಭಿಸಿತು. 'ನಿಖರವಾದ, ವಯಸ್ಸಿಗೆ ಸೂಕ್ತವಾದ ಮತ್ತು ಸಾಂಸ್ಕೃತಿಕವಾಗಿ ಸಂಬಂಧಿಸಿದ ಮಾಹಿತಿಯೊಂದಿಗೆ ಯುವಜನತೆಯನ್ನು ಸಶಕ್ತಗೊಳಿಸಲು, ಆರೋಗ್ಯಕರ ವರ್ತನೆಗಳನ್ನು ಉತ್ತೇಜಿಸಲು ಮತ್ತು ನೈಜ ಜೀವನದ ಸಂದರ್ಭಗಳಿಗೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಲು ನೆರವಾಗುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು' ಎಂಎಚ್‌ಆರ್‌ಡಿ (ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ) ಈ ಉಪಕ್ರಮವನ್ನು ನಿರ್ಣಾಯಕವೆಂದು ಪರಿಗಣಿಸಿದರೂ, ಅದನ್ನು ಕಾರ್ಯಗತಗೊಳಿಸಲಿಲ್ಲ. ಅಷ್ಟೇ ಅಲ್ಲ, ನಂತರ ಈ ವಿಷಯ 'ಸೂಕ್ತವಾದುದಲ್ಲ' ಎಂದು 12ಕ್ಕೂ ಹೆಚ್ಚು ರಾಜ್ಯಗಳು ಯೋಜನೆಗೆ ಕೆಂಪು ಬಾವುಟ ತೋರಿಸಿದವು.
ಬದಲಾಗುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವೇದನೆಗಳ ಹೊರತಾಗಿಯೂ, 'ಲೈಂಗಿಕ' ಮತ್ತು 'ಲೈಂಗಿಕತೆ' ಎಂಬ ಪದಗಳ ಕುರಿತು ನಿಷೇಧಾತ್ಮಕ ಅರ್ಥಗಳು ಹಾಗೇ ಉಳಿದುಕೊಂಡಿವೆ. ಈ ವಿಷಯದ ಬಗ್ಗೆ ಪ್ರಾಮಾಣಿಕ, ತಾರ್ಕಿಕ, ಆರೋಗ್ಯಕರ ಮತ್ತು ಮುಕ್ತ ಬೋಧನೆಯ ಸಂಪೂರ್ಣ ಕೊರತೆ ಇರುವುದರ ಪರಿಣಾಮವಾಗಿ ಅದು ಮುಜುಗರ ಮತ್ತು ನಿರಾಕರಣೆಯಿಂದ ಆವರಿಸಲ್ಪಟ್ಟಿದೆ.
ಸಮಗ್ರ ವಿಧಾನವಿದು:
ದೈಹಿಕ ಆರೋಗ್ಯ ಮತ್ತು 'ಲಿಂಗ ಸಂವೇದನೆ'ಯ ಅವಶ್ಯಕತೆಯನ್ನು ರಾಷ್ಟ್ರೀಯ ಆರೋಗ್ಯ ನೀತಿ 2020 ಉಲ್ಲೇಖಿಸುತ್ತದೆಯಾದರೂ ಹದಿಹರೆಯದ ಲೈಂಗಿಕ ಶಿಕ್ಷಣವನ್ನು ಅದು ಕಡೆಗಣಿಸಿದೆ.
ವಿಶೇಷವಾಗಿ ಔಪಚಾರಿಕ ಶಿಕ್ಷಣಕ್ಕೆ ಪ್ರವೇಶ ಹೊಂದಿರದ ಅತ್ಯಂತ ದುರ್ಬಲ ಹದಿಹರೆಯದವರಿಗೆ ಸಮಗ್ರ ಲೈಂಗಿಕ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಹಾಗೂ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯಲ್ಲಿ ನಿರ್ಬಂಧಿಸುವ ಬೋಧನಾಶಾಸ್ತ್ರದಿಂದ ಅಳೆಯುವ ಹಕ್ಕುಗಳ ಆಧಾರಿತ ವಿಧಾನಕ್ಕೆ ಆರಾಮವಾಗಿ ಚಲಿಸುವಂತಹ ತರಬೇತುದಾರರ ಗುಂಪನ್ನು ರಚಿಸುವ ಅವಶ್ಯಕತೆಯಿದೆ.
ಸಮಗ್ರವಾದ, ಸ್ವ-ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸುವ, ವಿನೋದ ಮತ್ತು ಕಲಿಕೆಯೊಂದಿಗೆ ಸಂವಾದಾತ್ಮಕ ಚಟುವಟಿಕೆಗಳ ನ್ಯಾಯಯುತ ಮಿಶ್ರಣವನ್ನು ಒಳಗೊಂಡಿರುವ ಒಂದು ಕಾರ್ಯಕ್ರಮವನ್ನು ರೂಪಿಸುವ ಅವಶ್ಯಕತೆ ಇದೆ. ಅದನ್ನು ಕಾರ್ಯಗತಗೊಳಿಸಲು ಶಾಲಾ ಅಧಿಕಾರಿಗಳು, ಶಿಕ್ಷಕರು, ಸಮುದಾಯದ ಮುಖಂಡರು ಮತ್ತು ಪೋಷಕರು ಒಪ್ಪುವಂತಹ ಹಾಗೂ ಹದಿಹರೆಯದವರಿಗೆ ಮಾರ್ಗದರ್ಶನ ನೀಡಲು ಸಕಾರಾತ್ಮಕ, ನಿರ್ಣಯಿಸದ ಮತ್ತು ಬೆಂಬಲಿಸುವ ಪಾತ್ರಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸಬೇಕಿದ್ದು, ಈ ಪೈಕಿ ಕೆಲವರನ್ನು ಲೈಂಗಿಕ ಶಿಕ್ಷಣ ತರಬೇತುದಾರರಾಗಿ ಸಜ್ಜುಗೊಳಿಸಬೇಕಿದೆ. ಈ ಉದ್ದೇಶಕ್ಕಾಗಿ ಸರಕಾರೇತರ ಸಂಸ್ಥೆಗಳು / ಸಿಬಿಒ ಗಳನ್ನು ತರಬಹುದಾಗಿದೆ.
ಪ್ರಚಲಿತ ಕಾಲಮಾನಕ್ಕೆ ತಕ್ಕಂತೆ, ಡಿಜಿಟಲ್ ಮಾಧ್ಯಮ ಮತ್ತು ವೆಬ್ ಆಧರಿತ ಅಂತರ್‌ಹಂತಗಳ ಬಳಕೆಯನ್ನು ಸಹ ಲೈಂಗಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಡಲು ಪ್ರಯತ್ನಿಸಬಹುದು.
ಈ ರೀತಿಯಲ್ಲಿ ಬರಲು ಆಗದಂತಹ ಲೈಂಗಿಕತೆ ಮತ್ತು ಸಂಬಂಧಗಳ ಬಗೆಗಿನ ನಿರ್ಣಾಯಕ ಪ್ರಶ್ನೆಗಳಿಗೆ ಖಾಸಗಿ, ವೈಯಕ್ತೀಕರಿಸಿದ ಮತ್ತು ಸುಲಭವಾಗಿ ಪಡೆದುಕೊಳ್ಳಬಹುದಾದ ಉತ್ತರಗಳನ್ನು ಇಂಟರ್ನೆಟ್ ಮತ್ತು ಡಿಜಿಟಲ್ ಮಾಧ್ಯಮವು ಸಕ್ರಿಯಗೊಳಿಸಬಹುದು. ನವೀನ ತಂತ್ರಜ್ಞಾನಗಳು, ವೆಬ್‌ಸೈಟ್‌ಗಳು, ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಯುವಜನತೆಯನ್ನು ನೇರವಾಗಿ ತಲುಪಲು ಲೈಂಗಿಕ ಶಿಕ್ಷಣತಜ್ಞರಿಗೆ ಈ ಮಾಧ್ಯಮಗಳು ಒಂದು ಮಾರ್ಗವನ್ನು ಒದಗಿಸಬಲ್ಲವು.