ಸರ್ಕಾರದಲ್ಲಿ ಯಾರೇ ಇರಲಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಮಾತ್ರ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳಿಗೆ ತಕ್ಕಂತೆ ಬದಲಾಗುತ್ತವೆ. ಹಾಗಿದ್ದರೂ, ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವಾಗ ಮಾತ್ರ ಅವು ಹೆಚ್ಚಾಗಲಿಲ್ಲ ಎಂಬುದಕ್ಕೆ ಅವು ಕೂಡಾ ರಾಜಕೀಯ ಜಾಣ್ಮೆಯನ್ನು ಪಡೆದುಕೊಂಡಿರುವುದೇ ಕಾರಣವೇನೋ ಅಂತ ಅನಿಸುತ್ತದೆ. ಚುನಾವಣಾ ಫಲಿತಾಂಶಗಳು ಹೊರಬಂದ ನಂತರ, ದಿನ ಬಿಟ್ಟು ದಿನ ಪೆಟ್ರೋಲ್ ಬೆಲೆಗಳು ಹೆಚ್ಚಾಗಲು ಪ್ರಾರಂಭಿಸಿದ್ದು, ಜನರ ಜೇಬಿಗೆ ಕತ್ತರಿಯನ್ನು ಹಾಕುತ್ತಿವೆ.
ಕೇವಲ ಒಂದು ತಿಂಗಳ ಅವಧಿಯೊಳಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 10 ಸಲ ಪರಿಷ್ಕರಿಸಲಾಗಿದೆ. ಇದರ ಪರಿಣಾಮವಾಗಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 100 ರೂ. ಗಡಿ ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 69 ಅಮೆರಿಕನ್ ಡಾಲರ್‌ಗೆ ಏರಿದ ಪರಿಣಾಮವಾಗಿ ಉಂಟಾದ ನಷ್ಟವನ್ನು ಸರಿದೂಗಿಸಲು ಬೆಲೆಗಳನ್ನು ಅನಿವಾರ್ಯವಾಗಿ ಪರಿಷ್ಕರಿಸಲಾಗಿದೆ ಎಂದು ಇಂಧನ ಮಾರಾಟ ಸಂಸ್ಥೆಗಳು ಸಬೂಬು ಹೇಳುತ್ತಿವೆ.
110 ಡಾಲರ್ ಇದ್ದಾಗ 71 ರೂ... ಈಗ ನೂರು! ಯಾಕೀ ಏರಿಕೆ?
2014ರಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆ ಬ್ಯಾರೆಲ್‌ಗೆ 110 ಅಮೆರಿಕನ್ ಡಾಲರ್ ಆಗಿತ್ತು. ಆದರೆ ಆಗ ಒಂದು ಲೀಟರ್ ಪೆಟ್ರೋಲ್ ಅನ್ನು 71 ರೂ. ಬೆಲೆಗೆ ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 57 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 110 ಅಮೆರಿಕನ್ ಡಾಲರ್ ವೆಚ್ಚವಾಗುತ್ತಿದ್ದಾಗಿನ ಬೆಲೆಯೊಂದಿಗೆ ಹೋಲಿಸಿದರೆ ಪ್ರಸ್ತುತ ಪೆಟ್ರೋಲ್ ಬೆಲೆ ಏರಿಕೆಯ ಹಿಂದಿನ ತರ್ಕವೇನು ಎಂದು ಪ್ರಶ್ನಿಸುತ್ತಿರುವ ಸಾಮಾನ್ಯ ಮನುಷ್ಯನ ಆಕ್ಷೇಪ ಸಕಾರಣವಾಗಿಯೇ ಇದೆ.
ಜಿಎಸ್‌ಟಿ ಜಾರಿಗೆ ಬಂದರೆ ಗ್ರಾಹಕರಿಗೆ ಹೇಗೆ ಲಾಭ
ಭಾರತದ ಇಂಧನ ಆಮದು ಅವಲಂಬನೆಯ ಮೇಲೆ ಗಮನ ಕೇಂದ್ರೀಕರಿಸಲು ವಿಫಲವಾದವು ಎಂದು ಪ್ರಧಾನಮಂತ್ರಿಗಳು ಹಿಂದಿನ ಸರ್ಕಾರಗಳನ್ನು ದೂಷಿಸುತ್ತಿರುವಾಗ, ಅವರು ಕೇವಲ ಅರ್ಧ ಸತ್ಯವನ್ನು ಮಾತ್ರ ಮಾತನಾಡುತ್ತಿದ್ದರು. ಕೋವಿಡ್ ಬರುವ ಮೊದಲು ಪೆಟ್ರೋಲ್‌ನ ಅಬಕಾರಿ ಸುಂಕವು ಕೇವಲ 19.98 ರೂ. ಆಗಿತ್ತು. ನಂತರ ಅದನ್ನು ಲೀಟರ್‌ಗೆ 32.98 ರೂ. ಗಳಿಗೆ ಹೆಚ್ಚಿಸಲಾಯಿತು. ಅದೇ ಸಮಯದಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕವು ಪ್ರತಿ ಲೀಟರ್‌ಗೆ 15.83 ರೂ. ಗಳಿಂದ 31.83 ರೂ. ಗಳಿಗೆ ಏರಿತು. ಇಂಧನ ಬೆಲೆಗೆ ವ್ಯಾಟ್ ಸೇರಿಸುವ ಮೂಲಕ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳು ಸಹ ಕೊಡುಗೆ ನೀಡಿವೆ. ಇಂಧನ ಬೆಲೆಯ ಮೂರನೇ ಎರಡರಷ್ಟು ಭಾಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ಸುಂಕ ಮತ್ತು ತೆರಿಗೆಗಳನ್ನೇ ಒಳಗೊಂಡಿದೆ. ಒಂದು ವೇಳೆ ಪೆಟ್ರೋಲಿಯಂ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಆಗ ಪೆಟ್ರೋಲ್ ಬೆಲೆ ಲೀಟರ್‌ಗೆ 75 ರೂ. ಮತ್ತು ಡೀಸೆಲ್ ಲೀಟರ್‌ಗೆ ಕೇವಲ68 ರೂ. ಆಗುತ್ತದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಅವರ ಈ ಸಲಹೆ ಅನುಕರಣೆಗೆ ಸೂಕ್ತವಾಗಿದೆ.
ಬಜೆಟ್ ಗಾತ್ರ ದ್ವಿಗುಣ
ಎನ್‌ಡಿಎ ಆಳ್ವಿಕೆಯ ಏಳು ವರ್ಷಗಳ ಅವಧಿಯಲ್ಲಿ ದೇಶದ ಬಜೆಟ್‌ನ ಗಾತ್ರವು ದ್ವಿಗುಣಗೊಂಡಿದೆ. ಅದೇ ರೀತಿ ಪೆಟ್ರೋಲಿಯಂ ಇಂಧನಗಳಿಂದ ಸರ್ಕಾರಕ್ಕೆ ಬರುವ ಆದಾಯವು ಈ ಅವಧಿಯಲ್ಲಿ ಐದು ಪಟ್ಟು ಹೆಚ್ಚಾಗಿದೆ.
2014-15ರ ಅವಧಿಯಲ್ಲಿ ಪೆಟ್ರೋಲಿಯಂ ಮೇಲಿನ ಅಬಕಾರಿ ಸಂಗ್ರಹವು 74,158 ಕೋಟಿ ರೂ. ಆಗಿತ್ತು. 2020-21ರ ಹೊತ್ತಿಗೆ ಪೆಟ್ರೋಲಿಯಂ ಇಂಧನಗಳಿಂದ ಬರುವ ಅಬಕಾರಿ ಸುಂಕದ ಆದಾಯವು 2.95 ಲಕ್ಷ ಕೋಟಿ ರೂ. ಗಳನ್ನು ತಲುಪಿದೆ ಎಂದು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಕುಸಿದಾಗಲೂ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಒಂಬತ್ತು ಪಟ್ಟು ಹೆಚ್ಚಿಸಿದೆ. ತನ್ನ ಆದಾಯ ಸಾಕಷ್ಟಿರುವುದನ್ನು ಖಾತರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಮೂಲಕ ಜಗತ್ತಿನಲ್ಲಿಯೇ ಅತ್ಯಧಿಕ ಎನ್ನಲಾದ ಅಬಕಾರಿ ಸುಂಕವನ್ನು ಸಂಗ್ರಹಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರವು ಯಾವುದೇ ಉಪಕ್ರಮವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ರಾಜ್ಯಗಳು ಅಂತಹ ತ್ಯಾಗ ಮಾಡಲು ಸ್ವತಂತ್ರವಾಗಿವೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದೆ. ಕೇಂದ್ರದ ಈ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ಕೇಂದ್ರ ಹಣಕಾಸು ಸಚಿವರು ಪೆಟ್ರೋಲಿಯಂ ಬೆಲೆ ಕುರಿತಂತೆ ತಾವು ಧರ್ಮಸಂಕಟ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.
ಸುಂಕದ ಹೆಸರಲ್ಲಿ ಗ್ರಾಹಕರಿಂದ ಬೇಕಾಬಿಟ್ಟಿ ಲೂಟಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಮೇಲಿನ ಸುಂಕದ ಹೆಸರಿನಲ್ಲಿ ಜನರಿಂದ 5 ಲಕ್ಷ ಕೋಟಿ ರೂ. ಗಳನ್ನು ಕಿತ್ತುಕೊಳ್ಳುತ್ತಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿ ತರುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಹೇಳುತ್ತಲೇ, ಒಂದು ವೇಳೆ ರಾಜ್ಯಗಳು ಬಯಸಿದಲ್ಲಿ ಅವುಗಳೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕೇಂದ್ರದ ಹೇಳಿಕೆ ವಂಚಕತನದ್ದು ಎನಿಸಿದೆ.
ಏಳು ತಿಂಗಳ ಅಂತರದ ನಂತರ ಜಿಎಸ್‌ಟಿ ಪರಿಷತ್ತು ಮುಂದಿನ ವಾರ ಸಭೆ ಸೇರಲಿದೆ. ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವಂತೆ, ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ವೈದ್ಯಕೀಯ ಸೇವೆಗಳ ಮೇಲಿನ ತೆರಿಗೆ ವಿನಾಯಿತಿಗಳನ್ನು ಪರಿಷತ್ತು ಚರ್ಚಿಸುವ ಸಾಧ್ಯತೆಯಿದೆ. ನಿರುದ್ಯೋಗ, ಹಣದುಬ್ಬರ ಮತ್ತು ವೈದ್ಯಕೀಯ ವೆಚ್ಚಗಳಲ್ಲಿ ಉಂಟಾಗಿರುವ ಭಾರಿ ಹೆಚ್ಚಳದಿಂದ ಈಗಾಗಲೇ ಹೊರೆ ಎದುರಿಸುತ್ತಿರುವ ಜನರ ಬಗ್ಗೆ ಸರ್ಕಾರಗಳು ಜವಾಬ್ದಾರಿಯುತವಾಗಿ ವರ್ತಿಸುವ ಸಮಯ ಇದು. ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಕೂಡಾ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಮಾತ್ರ ಪೆಟ್ರೋಲಿಯಂ ಇಂಧನ ಬೆಲೆ ಏರಿಕೆಯಿಂದ ದೇಶದ ನಾಗರಿಕರು ಮುಕ್ತಿ ಹೊಂದಬಹುದು.