ಬೆಂಗಳೂರು : ಕುಟುಂಬ ರಾಜಕಾರಣ ವಿರೋಧಿಸಿ ರಾಷ್ಟ್ರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಬಿಜೆಪಿಗೆ ರಾಜ್ಯದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ಗೆ ಕಡಿವಾಣ ಹಾಕಿ ಅದನ್ನು ರಾಜಕೀಯವಾಗಿ ದಕ್ಕಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಧೋರಣೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರನ್ನು ನಿರ್ಲಕ್ಷ್ಯ ಮಾಡುತ್ತ ಬಂದಿರುವ ಬಿಜೆಪಿ ಹೈಕಮಾಂಡ್ಗೆ ಹಲವಾರು ಕಠಿಣ ಸವಾಲುಗಳು ಎದುರಾಗತೊಡಗಿವೆ.
ಸೋಲಿನ ಭಯ : ರಾಜ್ಯ ಬಿಜೆಪಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಂಸದರು ಶಾಸಕರು, ವಿಧಾನ ಪರಿಷತ್ ಸದಸ್ಯರು ಕುಟುಂಬ ರಾಜಕಾರಣ ಹಿನ್ನೆಲೆಯನ್ನು ಹೊಂದಿದವರೇ ಆಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಸಿದ್ಧಾಂತಕ್ಕೆ ಬದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೌಟುಂಬಿಕ ಹಿನ್ನೆಲೆ ಇದ್ದವರಿಗೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ಸೋಲನುಭವಿಸಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತವೆಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಸಂಬಂಧಗಳ ಸಮಸ್ಯೆ : ರಾಜ್ಯದಲ್ಲಿ ಲೋಕಸಭೆ ಸದಸ್ಯರ ಪೈಕಿ ತುಮಕೂರು ಸಂಸದ ಜಿ ಸಿ ಬಸವರಾಜ ಅವರ ಮಗ ಜ್ಯೋತಿ ಗಣೇಶ್ ಶಾಸಕರಾಗಿದ್ದಾರೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ತಂದೆ ಯಡಿಯೂರಪ್ಪ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಅವರ ಪತ್ನಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ.
ಕಲಬುರಗಿ ಸಂಸದ ಉಮೇಶ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಶಾಸಕರಾಗಿದ್ದಾರೆ. ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ಧನ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಶಾಸಕರಾಗಿದ್ದಾರೆ. ಬಳ್ಳಾರಿ ಸಂಸದ ದೇವೆಂದ್ರಪ್ಪ ಮಾಜಿ ಸಚಿವ ರಮೇಶ ಜಾರಕಿಹೊಳಿ ಹತ್ತಿರದ ಸಂಬಂಧಿಯಾಗಿದ್ದಾರೆ.
ಬಿಜೆಪಿಯ ಶಾಸಕರುಗಳಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರ ರಮೇಶ ಜಾರಕಿಹೊಳಿ ಶಾಸಕರಾಗಿದ್ದಾರೆ. ಕರುಣಾಕರ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಶಾಸಕರಾಗಿದ್ದಾರೆ. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಹೋದರ ಹನುಮಂತಪ್ಪ ನಿರಾಣಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಕುಟುಂಬ ರಾಜಕಾರಣದ ಕುಡಿಯಾಗಿದ್ದಾರೆ. ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದರು. ಸೊರಬದ ಶಾಸಕ ಕುಮಾರ ಬಂಗಾರಪ್ಪ ಅವರ ತಂದೆ ಎಸ್ ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದರಾಗಿದ್ದರು.
ಸಂಬಧಿಕರಲ್ಲೇ ಟಿಕೆಟ್ ನಿರೀಕ್ಷೆ : ಬಿಜೆಪಿಯಲ್ಲಿನ ಹೆಚ್ಚಿನ ಶಾಸಕರು, ಸಂಸದರುಗಳು ಒಂದಿಲ್ಲೊಂದು ರೀತಿಯಲ್ಲಿ ಕೌಟುಂಬಿಕ ರಾಜಕಾರಣದ ಹಿನ್ನೆಲೆಯನ್ನ ಹೊಂದಿದವರಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿರುವ ಹೆಚ್ಚಿನ ಶಾಸಕರು ಮತ್ತು ಸಂಸದರುಗಳು ಬರಲಿರುವ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ, ಸಹೋದರರಿಗೆ ಹಾಗು ಹತ್ತಿರದ ಸಂಬಂಧಿಗಳಿಗೆ ಪಕ್ಷದ ಟಿಕೆಟ್ನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರು ಮಕ್ಕಳ ಉತ್ತಮ ರಾಜಕೀಯಕ್ಕಾಗಿಯೇ ಬಿಜೆಪಿ ಪಕ್ಷವನ್ನ ಸೇರಲು ಲೆಕ್ಕಾಚಾರ ಹಾಕಿದ್ದಾರೆ. ಸಚಿವ ಎಂ ಟಿ ಬಿ ನಾಗರಾಜ್ ಮಗನ ಭವಿಷ್ಯಕ್ಕಾಗಿಯೇ ಬಿಜೆಪಿ ಸೇರಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಪುತ್ರ ಬಿ ವೈ ವಿಜಯೇಂದ್ರಗೆ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಮಗ ಕಾಂತರಾಜು ಅವರಿಗೆ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ತಮ್ಮ ಸೊಸೆ ಅಥವಾ ಮಗನಿಗೆ, ಸಂಸದ ಬಿ ಎನ್ ಬಚ್ಚೇಗೌಡ ತಮ್ಮ ಮಗನಿಗೆ, ಮಾಜಿ ಸಂಸದ ಪ್ರಭಾಕರ ಕೋರೆ ತಮ್ಮ ಪುತ್ರ ಅಮಿತ್ ಕೋರೆಗೆ, ಸಚಿವ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ, ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಇಬ್ಬರು ಮಕ್ಕಳಿಗೆ, ಸಚಿವ ವಿ ಸೋಮಣ್ಣ ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಬರಲಿರುವ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವ ಇರಾದೆಯಲ್ಲಿದ್ದಾರೆ.
ಕುಟುಂಬ ರಾಜಕಾರಣದ ವಿರೋಧ : ಪ್ರಧಾನಿ ಮೋದಿಯವರು ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಕುಟುಂಬ ರಾಜಕಾರಣದ ವಿರೋಧಿಯಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡದೇ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರಬೇಕೆನ್ನುವ ಆಶಯದಿಂದ ಕುಟುಂಬ ರಾಜಕಾರಣದ ಹಿನ್ನೆಲೆಯ ರಾಜಕಾರಣಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿಲ್ಲ.
ಈ ಕಾರಣಕ್ಕಾಗಿಯೆ ಬಿಜೆಪಿ ಹೈಕಮಾಂಡ್ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರರಾದ ಬಿ ವೈ ವಿಜಯೆಂದ್ರ ಅವರಿಗೆ ವರುಣಾದಲ್ಲಿ ಟಿಕೆಟ್ ನಿರಾಕರಿಸಿತ್ತು. ಹಾಗೆಯೇ ಮಾಜಿ ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಿದರ್ಶನಗಳೂ ಇವೆ.
ಇದನ್ನೂ ಓದಿ : ಜನ ಒತ್ತಾಯ ಮಾಡಿದ ಕಾರಣಕ್ಕೆ ನಾನು ಆ ಹೇಳಿಕೆ ನೀಡಿದ್ದೆ, ಅಂತಿಮ ತೀರ್ಮಾನ ಪಕ್ಷದ್ದು: ಬಿಎಸ್ ವೈ
ಆದರೆ, ಬೆಳಗಾವಿ ಸಂಸದರಾಗಿದ್ದ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್ಗೆ ಬಲಿಯಾಗಿದ್ದಾಗ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಧೋರಣೆಗೆ ವ್ಯತಿರಿಕ್ತವಾಗಿ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ನೀಡಿ ಪ್ರಯಾಸದಾಯಕ ಗೆಲವು ಪಡೆಯಿತು. ಮಂಗಳಾ ಅಂಗಡಿ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಸೋಲುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.
ಯಡಿಯೂರಪ್ಪ ಅಸಮಾಧಾನ : ಪಕ್ಷದ ಈ ನಿರ್ಧಾರ ರಾಜ್ಯದಲ್ಲಿನ ಹಲವಾರು ಬಿಜೆಪಿ ನಾಯಕರಿಗೆ ಅಸಮಾಧಾನ ತಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೌಟುಂಬಿಕ ರಾಜಕಾರಣ ವಿರೋಧಿಸುವ ನೀತಿಗೆ ಅತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ. ತಮ್ಮ ಪುತ್ರ ಬಿ ವೈ ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡದೇ ವಿಶ್ವಾಸಕ್ಕೆ ತಗೆದುಕೊಳ್ಳದಿರುವುದಕ್ಕೆ ಆಕ್ರೋಶಗೊಂಡಿರುವ ಯಡಿಯೂರಪ್ಪ ಅವರು ಚುನಾವಣೆ ನಿವೃತ್ತಿಯಂತಹ ಘೋಷಣೆ ಮಾಡಿ ಬಿಜೆಪಿ ಹೈಕಮಾಂಡ್ಗೆ ಅಸಮಾಧಾನದ ತೀವ್ರತೆಯ ಸಂದೇಶವನ್ನು ರವಾನಿಸಿದ್ದಾರೆ.
ಯಡಿಯೂರಪ್ಪ ಸವಾಲು : ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಡ ಬಳಿಕ ತಮ್ಮ ಮಾರ್ಗದರ್ಶನದ ಪ್ರಕಾರ ಸರಕಾರ ಮತ್ತು ಪಕ್ಷ ಮುನ್ನಡೆಯಬೇಕು. ತಮ್ಮ ಪುತ್ರ ವಿಜಯೇಂದ್ರಗೆ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಪ್ರಮುಖ ಖಾತೆಯ ಸಚಿವ ಸ್ಥಾನ ನೀಡಬೇಕೆನ್ನುವುದು ಯಡಿಯೂರಪ್ಪ ನಿರೀಕ್ಷೆಯಾಗಿತ್ತು.
ಇದ್ಯಾವುದೂ ಈಡೇರದ ಕಾರಣ ಹೈಕಮಾಂಡ್ ಮೇಲಿನ ವಿಶ್ವಾಸ ಕಳೆದುಕೊಂಡ ಯಡಿಯೂರಪ್ಪ 'ಬಿಜೆಪಿ ಪಕ್ಷದ ಸಹವಾಸ' ವೇ ಬೇಡ ಎನ್ನುವ ಅರ್ಥದಲ್ಲಿ ಚುನಾವಣೆ ರಾಜಕೀಯ ನಿವೃತ್ತಿ ಘೋಷಿಸಿ ಇದರ ಪರಿಣಾಮ ಎದುರಿಸುವಂತೆ ಬಿಜೆಪಿಯಲ್ಲಿರುವ ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ಕುಟುಂಬ ರಾಜಕಾರಣ ವಿರೋಧಿಸಿ ನಿರ್ಧಾರಗಳನ್ನು ತಗೆದುಕೊಳ್ಳುವುದು ಬಿಜೆಪಿ ಹೈಕಮಾಂಡ್ಗೆ ಈಗ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಬಿಜೆಪಿಯ ಲೋಕಸಭೆ ಸದಸ್ಯರು ಮತ್ತು ಶಾಸಕರು ಫ್ಯಾಮಿಲಿ ಪಾಲಿಟಿಕ್ಸ್ ಹಿನ್ನೆಲೆಯವರೇ ಆಗಿರುವುದರಿಂದ ಪಕ್ಷದಿಂದ ಅವರನ್ನು ದೂರವಿಟ್ಟು ಹೊಸಬರಿಗೆ ಅವಕಾಶ ನೀಡಿ ಚುನಾವಣೆ ರಾಜಕಾರಣ ಮಾಡಿ ರಾಜ್ಯದಲ್ಲಿ ಯಶಸ್ಸು ಗಳಿಸುವುದು ಬಿಜೆಪಿಗೆ ಬಿಗ್ ಚಾಲೆಂಜ್ ಆಗಿದೆ.
ಇದನ್ನೂ ಓದಿ : ಯಡಿಯೂರಪ್ಪರ ಹೇಳಿಕೆ ಸಲಹೆ ಅಷ್ಟೇ; ರಾಜ್ಯದ ಬಗ್ಗೆ ಮೋದಿ, ಶಾ ತೀರ್ಮಾನ ತೆಗೆದುಕೊಳ್ತಾರೆ: ಸಿಎಂ