ಹೈದರಾಬಾದ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವ್ಯಾಪಕ ಟೆಸ್ಟಿಂಗ್ ಅತ್ಯಂತ ಅಗತ್ಯ ಎಂದು ಡಬ್ಲ್ಯೂಹೆಚ್‌ಒ ಮೂರು ತಿಂಗಳ ಹಿಂದೆಯೇ ಹೇಳಿತ್ತು. ಆಗ ಭಾರತವು ಟೆಸ್ಟಿಂಗ್ ಕಿಟ್‌ಗಳ ಖರೀದಿ ಮತ್ತು ಅಭಿವೃದ್ಧಿಯಲ್ಲಿ ನಿರತವಾಗಿತ್ತು.
ಆದರೂ ಈಗ ಪರೀಕ್ಷೆಯ ದರವು ಪ್ರತಿ ದಿನ 1,50,000ರಲ್ಲಿ ಸಾಗಿದೆ. ಶೇ. 52.48ರಷ್ಟು ಚೇತರಿಕೆ ದರ ಉತ್ತಮವಾಗಿದ್ರೂ ಟೆಸ್ಟಿಂಗ್ ಕಡಿಮೆ ಇರುವುದರಿಂದ ಹೆಚ್ಚು ರಿಸ್ಕ್ ಇರುವ ಜನರಿಗೆ ಅಂದರೆ ಹೃದಯ ರೋಗ, ಮೂತ್ರಪಿಂಡಗಳ ರೋಗ ಮತ್ತು ಶ್ವಾಸಕೋಶದ ಸಮಸ್ಯಗಳು, ಡಯಾಬಿಟೀಸ್ ಮತ್ತು ಹೈಪರ್‌ಟೆನ್ಷನ್ ಇರುವವರಲ್ಲಿ ಮಾರಣಾಂತಿಕವಾಗಿ ಪರಿಣಮಿಸಿದೆ.
ಲ್ಯಾನ್ಸೆಟ್ ಅಧ್ಯಯನದಲ್ಲಿ ಬಹಿರಂಗಗೊಂಡ ಪ್ರಕಾರ ಕೊರೊನಾದಿಂದ 170 ಕೋಟಿ ಜನರು ವಿಶ್ವಾದ್ಯಂತ ಅತ್ಯಂತ ಅಪಾಯದ ಸನ್ನಿವೇಶ ಹೊಂದಿದ್ದಾರೆ. ಅಂದರೆ ಇದು ವಿಶ್ವದ ಜನಸಂಖ್ಯೆಯ ಶೇ. 20ರಷ್ಟಾಗಿದೆ. ಸಿಸಿಎಂಬಿ ನಿರ್ದೇಶಕರ ಸಲಹೆಯನ್ನು ನಾವು ಪರಿಗಣಿಸುವುದು ಅತ್ಯಂತ ಅಗತ್ಯವೂ ಆಗಿದೆ. ಸಿಎಸ್‌ಐಆರ್ ಸೆಲ್ಯುಲರ್ ಮತ್ತು ಮಾಲೆಕ್ಯುಲರ್ ಬಯಾಲಜಿ ಕೇಂದ್ರ (ಸಿಸಿಎಂಬಿ) ನಿರ್ದೇಶಕ ರಾಕೇಶ್ ಮಿಶ್ರಾ ಹೇಳುವಂತೆ, ಏಷ್ಯಾದ ಅತಿದೊಡ್ಡ ಕೊಳಗೇರಿ ಧಾರಾವಿಯಲ್ಲಿ ರೋಗ ಹರಡುವುದನ್ನು ತಡೆಯುವಲ್ಲಿ ವಿಪರೀತ ಟೆಸ್ಟಿಂಗ್ ಅತ್ಯಂತ ಮಹತ್ವದ ಪಾತ್ರ ವಹಿಸಿದೆ.
ಭಾರತವು ತನ್ನ ಪರೀಕ್ಷೆ ಸಾಮರ್ಥ್ಯವನ್ನು ದಿನಕ್ಕೆ 10 ಲಕ್ಷಕ್ಕೆ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಸದ್ಯ ಆರ್‌ಟಿ-ಪಿಸಿಆರ್ ಟೆಸ್ಟಿಂಗ್ ಕಿಟ್‌ಗಳ ಕೊರತೆ ಇದೆ. ಇದರ ಜೊತೆಗೆ ಆರ್‌ಟಿ ಪಿಸಿಆರ್ ಪ್ರೈಮ್‌ಗಳನ್ನು ಮತ್ತು ಪ್ರೋಬ್‌ಗಳನ್ನು ಆಮದು ಮಾಡಿಕೊಳ್ಳುವುದು ಅತ್ಯಂತ ವೆಚ್ಚದಾಯಕ. ಇದಕ್ಕೆ ಪರಿಹಾರವಾಗಿ ಕಡಿಮೆ ವೆಚ್ಚದ ಪಿಸಿಆರ್ ಕ್ರಮವನ್ನು ಸಿಸಿಎಂಬಿ ಅಭಿವೃದ್ಧಿಪಡಿಸಿದೆ. ಇದಕ್ಕೆ ಐಸಿಎಂಆರ್‌ನ ಅನುಮೋದನೆ ಅಗತ್ಯವಿದೆ. ಈ ಮಧ್ಯೆ ಎನ್‌ಐಎಂಎಸ್, ಇಎಸ್‌ಐ ಮತ್ತು ಟಿಐಎಫ್‌ಆರ್‌ನ ವಿಜ್ಞಾನಿಗಳು ಆರ್‌ಟಿ ಎಲ್‌ಎಂಪಿ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಇದು ಕೋವಿಡ್-19 ಅರ್ಧಗಂಟೆಯಲ್ಲೇ ಪತ್ತೆ ಮಾಡುತ್ತದೆ. ದಕ್ಷಿಣ ಕೊರಿಯಾ ಸಂಸ್ಥೆ ಅಭಿವೃದ್ಧಿಪಡಿಸಿದ ಹೊಸ ಆಂಟಿಜೆನ್/ಪ್ರತಿಕಾಯ ಪರೀಕ್ಷೆಯನ್ನು ಐಸಿಎಂಆರ್ ಅನುಮೋದಿಸಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲಲು, ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ನಡೆಸುವ ಮಹತ್ವದ ಹೆಜ್ಜೆಯನ್ನು ನಾವು ಇಡಲೇಬೇಕು. ಸಾಂಕ್ರಾಮಿಕ ರೋಗಕ್ಕೆ ನ್ಯೂಜಿಲೆಂಡ್ ತೆಗೆದುಕೊಂಡ ಕ್ರಮ ಅತ್ಯಂತ ಮಹತ್ವದ್ದಾಗಿದೆ. ಇನ್ನೊಂದೆಡೆ 8 ರಾಜ್ಯಗಳಲ್ಲಿ ಮರಣ ಪ್ರಮಾಣ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ 3.5 ಲಕ್ಷ ಕೋವಿಡ್-19 ಪ್ರಕರಣ ದಾಖಲಾಗಿವೆ. ಈಗಾಗಲೇ ಹಣಕಾಸು ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಟೆಸ್ಟಿಂಗ್ ನಿಲ್ಲಿಸಿಬಿಟ್ಟಿವೆ.
ಇದರಿಂದಾಗಿ ಸಾಂಕ್ರಾಮಿಕ ರೋಗವು ಸಮುದಾಯಕ್ಕೆ ಹರಡುವ ಹಂತ ತಲುಪಿದೆ. ಇದರಿಂದ ಯಾರೂ ಸುರಕ್ಷಿತರಲ್ಲ ಎಂಬ ಭಾವನೆ ಉಂಟಾಗಿದೆ. ಜರ್ಮನಿಯಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಳಾಗದಂತೆ ಕಾಪಾಡಿಕೊಂಡಿತು. ರೋಗಿಗಳನ್ನು ಕಂಡುಹಿಡಿಯುವುದು ಮತ್ತು ಪರೀಕ್ಷೆ ಮಾಡುವಲ್ಲಿ ಭಾರತ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಬಹುದು.
ಕೋವಿಡ್-19 ಚಿಕಿತ್ಸೆ ವೆಚ್ಚವನ್ನು ಬಹುತೇಕ ಜನರಿಗೆ ಇನ್ನೂ ಭರಿಸಲಾಗುತ್ತಿಲ್ಲ. ಇದಕ್ಕಾಗಿ ಬಡವರಿಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಆರೋಗ್ಯ ವಿಮೆ ವೆಚ್ಚವನ್ನು ಭರಿಸುವ ಅಗತ್ಯವಿದೆ. ಭಾರತದಲ್ಲಿ ಮಾನ್ಸೂನ್ ಆರಂಭವಾಗಿರುವುದರಿಂದ ಕೊರೊನಾ ಜೊತೆಗೆ ಹಲವು ಇತರ ಸಾಂಕ್ರಾಮಿಕ ರೋಗಗಳು ಸಾರ್ವಜನಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟು ಮಾಡಬಹುದಾಗಿದೆ ಎಂದು ವೈದ್ಯಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಪತ್ತನ್ನು ಎದುರಿಸಲು ಕೋವಿಡ್-19 ಲ್ಯಾಬ್‌ಗಳನ್ನು ಹೆಚ್ಚು ಮಾಡಬೇಕಿದೆ. ದೀರ್ಘಕಾಲೀನ ಅನಾರೋಗ್ಯಗಳಿಂದ ಬಳಲುತ್ತಿರುವವರಿಗೆ ಪರೀಕ್ಷೆ ಮೂಲಕ ಮತ್ತು ಅವರನ್ನು ಪ್ರತ್ಯೇಕವಾಗಿಡುವ ಮೂಲಕ ರಕ್ಷಿಸಬೇಕಿದೆ. ಸಾಂಕ್ರಾಮಿಕ ರೋಗವನ್ನು ತಡೆಯದೇ ಭಾರತವು ಯಾವುದೇ ರೀತಿಯಲ್ಲೂ ಈ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ.