ಬೆಂಗಳೂರು: ಪ್ರತಿ ಕಂದನಿಗೂ ತಾಯಿಯ ಎದೆಹಾಲು ಅಮೃತ. ಆದರೆ, ಕಾಲಕ್ರಮೇಣ ಆಧುನಿಕತೆಯ ಗೀಳಿಗೆ ಬಿದ್ದು ಅದೆಷ್ಟೋ ತಾಯಂದಿರು ಮಗುವಿಗೆ ಎದೆಹಾಲು ಕೊಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ತನ್ಯಪಾನ ಸಪ್ತಾಹ ಜಾಗೃತಿ ಕಾರ್ಯಕ್ರಮ ಆಚರಿಸುತ್ತಿದೆ. ಆ.1 ರಿಂದ 7ರವರೆಗೆ ಸಪ್ತಾಹ ನಡೆಯುತ್ತಿದ್ದು, ಎದೆಹಾಲಿನ ಮಹತ್ವದ ಕುರಿತು ಸಾರುತ್ತಿದೆ.
ಎದೆಹಾಲು ಅಮೃತ ಯಾಕೆ ಗೊತ್ತಾ?
- ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂಭಿಸಬೇಕು. ಸತತ 6 ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು.
- ತಾಯಿಯ ಎದೆಹಾಲಿನಲ್ಲಿ ಶಿಶುವಿನ ಸದೃಢ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು, ವಿಟಮಿನ್, ಖನಿಜಾಂಶಗಳು ಅಡಕವಾಗಿದೆ.
- ಸ್ತನ್ಯಪಾನ ನವಜಾತ ಶಿಶುಗಳನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ.
- ಸ್ತನ್ಯಪಾನವು ವಿಶೇಷವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಹೆಚ್ಚು ಪರಿಣಾಮಕಾರಿ.
- ಇದು ಪ್ರತಿರಕ್ಷಣಾವಾಹಕಗಳನ್ನು ತಾಯಿಯಿಂದ ನೇರವಾಗಿ ಪಡೆಯುವುದರ ಮೂಲಕ ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ರಾಜ್ಯದಲ್ಲಿ ಪ್ರತಿವರ್ಷ 1000ಕ್ಕೆ 31 ಕ್ಕೂ ಹೆಚ್ಚು ಶಿಶುಗಳ ಸಾವು:
ಕರ್ನಾಟಕದಲ್ಲಿ ಪ್ರತಿವರ್ಷವೂ ಸಾವಿರಕ್ಕೆ 31ಕ್ಕೂ ಅಧಿಕ ಶಿಶುಗಳು ಸಾವಿಗೀಡಾಗುತ್ತಿವೆ. ಮೊದಲ ಆರು ತಿಂಗಳ ಜೀವಿತಾವಧಿಯಲ್ಲಿ ಸೂಕ್ತ ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯ ಸಾಧಿಸಲು ಶಿಶುಗಳಿಗೆ ಪ್ರತ್ಯೇಕವಾಗಿ ಎದೆಹಾಲು ಕುಡಿಸಬೇಕು ಎಂದು ಡಬ್ಲ್ಯೂಹೆಚ್ಓ ಶಿಫಾರಸು ಮಾಡಿದೆ.
ಸ್ತನ್ಯಪಾನದಿಂದ ಮಗುವಿನ ಜೊತೆ ತಾಯಿಗೂ ಪ್ರಯೋಜನ:
ತಾಯಂದಿರ ಎದೆಹಾಲು ಮಗುವಿಗೆ ಮಾತ್ರವಲ್ಲದೇ ತಾಯಿಗೂ ಹಲವು ಪ್ರಯೋಜನ ಆಗಲಿದೆ. ಹಾಲುಣಿಸುವ ಸಮಯದಲ್ಲಿ ಕ್ಯಾಲೊರಿಗಳಿಂದ ಪೂರ್ವ ಗರ್ಭಧಾರಣೆಯ ತೂಕವನ್ನು ಹಿಂದಿರುಗಿಸುತ್ತದೆ. ಮಧುಮೇಹವನ್ನು ಶೇ 26ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ. ಹಾಗೆ ಹೃದಯರಕ್ತನಾಳದ ಕಾಯಿಲೆಯನ್ನು ಶೇ 10ರಷ್ಟು ಕಡಿಮೆ ಮಾಡುತ್ತದೆ. ತಾಯಿ- ಮಗುವಿನ ಬಾಂಧವ್ಯ ಹೆಚ್ಚು ಮಾಡಲು ಎದೆಹಾಲು ಉಣಿಸುವುದು ಸಹ ಸಹಕಾರಿಯಾಗುತ್ತದೆ.
ಇನ್ನು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನದಿಂದ ಪ್ರತಿವರ್ಷ 2,20,000ಕ್ಕೂ ಹೆಚ್ಚು ಶಿಶುಗಳು ಉಳಿಯಲ್ಪಟ್ಟಿವೆ. ಜಾಗತಿಕವಾಗಿ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಶೇ 40 ಕ್ಕಿಂತ ಕಡಿಮೆ ಜನರು ಮಾತ್ರ ಎದೆಹಾಲು ನೀಡುತ್ತಾರೆ ಎಂಬ ಮಾಹಿತಿ ಇದೆ.
ಬಾಟೆಲ್ ಮೊರೆ ಹೋಗದಿರಿ, ನಿಮ್ಮ ಮಗುವಿಗೆ ನೀವೆ ಸೂಪರ್ ಅಮ್ಮ ಆಗಿ:
ಹಲವು ತಾಯಂದಿರು ಎದೆಹಾಲು ಕುಡಿಸದೇ ಬಾಟಲಿ ಹಾಲಿನ ಮೊರೆ ಹೋಗ್ತಾರೆ. ಈ ರೀತಿಯಲ್ಲಿ ಮಾಡುವುದರಿಂದ ಮಗುವಿನ ಆರೋಗ್ಯಕ್ಕೆ ಕಂಟಕವಾಗಲಿದೆ. ಇನ್ನು ಎದೆಹಾಲು ಕುಡಿಸುವುದರಿಂದ ಯಾವುದೇ ರೀತಿಯ ಸೌಂದರ್ಯ ಕಳೆದುಕೊಳ್ಳುವುದಿಲ್ಲ. ಬಾಟಲಿ ಹಾಲು ಕುಡಿಸುವುದರಿಂದ ಮಗುವಿಗೆ ಅಪೌಷ್ಟಿಕತೆ ಜೊತೆಗೆ ನಿಮೋನಿಯಾ, ಡೈರಿಯಾದಂತಹ ಸಮಸ್ಯೆಗಳು ಕಾಡಲಿದೆ ಎಂದು ಶಿಶು ವೈದ್ಯೆ ಡಾ.ದೀಪಾ ಪಡುವರಿ ವಿವರಿಸಿದರು.
ಈಗಂತೂ ನಗರದ ಎಲ್ಲಾ ಭಾಗದಲ್ಲೂ ಬ್ರೆಸ್ಟ್ ಫಿಡಿಂಗ್ ರೂಮ್ಗಳು ಇವೆ. ತಾಯಂದಿರು ಯಾವುದೇ ಅಂಜಿಕೆಯಿಲ್ಲದೇ ಮಗುವಿಗೆ ಎದೆಹಾಲು ನೀಡಬೇಕು. ಕೂತಲ್ಲೆ ಹಾಲು ಕುಡಿಸುವುದು ಕೂಡ ಒಂದು ವ್ಯಾಯಮವಾಗಿದ್ದು, ಮಗು ಎದೆಹಾಲು ಕೂಡಿದಾಗ ನಿಮ್ಮ ದೇಹದಲ್ಲಿರುವ ಕ್ಯಾಲೋರಿಸ್ ಬರ್ನ್ ಆಗುತ್ತದೆ.
ಪ್ರೊಟೆಕ್ಟ್ ಬ್ರೆಸ್ಟ್ ಫೀಡಿಂಗ್ ಹ್ಯಾಶ್ ಟ್ಯಾಗ್ ಮಾಡಿದ ಸುಧಾಕರ್:
ಇನ್ನು ಸ್ತನ್ಯಪಾನವು ಮಗುವಿಗೆ ಮತ್ತು ತಾಯಿಗೆ ಆರೋಗ್ಯಕರ ಆಯ್ಕೆಯಾಗಿದೆ. ಎದೆಹಾಲಿನ ಬದಲಿಗೆ ಮಗುವಿನ ಆಹಾರ ಉದ್ಯಮದ ತಪ್ಪುದಾರಿ ಗೆಳೆಯುವ ಮಾರುಕಟ್ಟೆಗೆ ಬೀಳಬೇಡಿ. ಸ್ತನ್ಯಪಾನವನ್ನು ರಕ್ಷಿಸುವ ಪ್ರತಿಜ್ಞೆ ಮಾಡೋಣಾ ಎಂದು ಮಾಜಿ ಆರೋಗ್ಯ ಸಚಿವ ಸುಧಾಕರ್ ಟೀಟ್ವ್ ಮಾಡಿದ್ದಾರೆ. ಹಾಗೆಯೇ ಪ್ರೊಟೆಕ್ಟ್ ಬ್ರೆಸ್ಟ್ ಫೀಡಿಂಗ್ ಅಂತ ಹ್ಯಾಶ್ ಟ್ಯಾಗ್ ಮೂಲಕ ಸಪ್ತಾಹವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ.