ಹೈದರಾಬಾದ್: ಕಚೇರಿಯಲ್ಲಿ ಸುದೀರ್ಘಾವಧಿಯವರೆಗೆ ಕೆಲಸ ಮಾಡುವುದು ಹಾಗೂ ಹೊತ್ತು ಗೊತ್ತಿಲ್ಲದೆ ಬಹಳ ಹೊತ್ತು ಕೆಲಸ ಮಾಡುತ್ತಿರುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಎಚ್ಚರಿಸಿದೆ ವಿಶ್ವ ಆರೋಗ್ಯ ಸಂಸ್ಥೆ. ಸುದೀರ್ಘಾವಧಿಯವರೆಗೆ ಸತತವಾಗಿ ಕೆಲಸ ಮಾಡುವ ಅಭ್ಯಾಸ ಜೀವಕ್ಕೆ ಕುತ್ತು ತರಬಹುದು ಎಂದು ಅದು ಹೇಳಿದೆ. ಕೋವಿಡ್-19 ಸಾಂಕ್ರಾಮಿಕದ ಈ ಸಮಯದಲ್ಲಿ ಹೀಗೆ ಕೆಲಸ ಮಾಡುವುದು ಮತ್ತೂ ಅಪಾಯಕಾರಿ ಎನ್ನಲಾಗಿದೆ.
ಸುದೀರ್ಘ ಶಿಫ್ಟ್ನಲ್ಲಿ ಕೆಲಸ ಅಪಾಯಕಾರಿ
ಸುದೀರ್ಘ ಶಿಫ್ಟ್ಗಳಲ್ಲಿ ಕೆಲಸ ಮಾಡುವುದರಿಂದ ಆರೋಗ್ಯಕ್ಕಾಗುವ ಅಪಾಯಗಳ ಬಗ್ಗೆ 2016 ರಲ್ಲಿ ಜಾಗತಿಕ ಮಟ್ಟದಲ್ಲಿ ಸಂಶೋಧನೆಯೊಂದನ್ನು ಕೈಗೊಳ್ಳಲಾಗಿತ್ತು. ಹೀಗೆ ಸುದೀರ್ಘಾವಧಿಗೆ ಕೆಲಸ ಮಾಡುತ್ತಿದ್ದ ಸುಮಾರು 7,45,000 ಉದ್ಯೋಗಿಗಳು ಪಾರ್ಶ್ವವಾಯು ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮೃತಪಟ್ಟಿರುವುದು ಈ ಸಂಶೋಧನೆಯಲ್ಲಿ ತಿಳಿದು ಬಂದಿತ್ತು. ಇದು 2000ನೇ ಇಸ್ವಿಗಿಂತ ಶೇ 30 ರಷ್ಟು ಹೆಚ್ಚಾಗಿದೆ. 2000ನೇ ಇಸ್ವಿಯಲ್ಲಿ ಹೀಗೆ ಅತಿ ಹೆಚ್ಚು ಕೆಲಸ ಮಾಡುತ್ತಿದ್ದ 3,98,000 ಜನ ಸ್ಟ್ರೋಕ್ನಿಂದ ಹಾಗೂ 3,47,000 ಸಾವಿರ ಜನ ಹೃದಯದ ಬೇನೆಗಳಿಂದ ಸಾವಿಗೀಡಾಗಿದ್ದರು. ಇವರೆಲ್ಲರೂ ವಾರಕ್ಕೆ 55 ತಾಸು ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಜಂಟಿ ಅಧ್ಯಯನದ ಪ್ರಕಾರ, ದೀರ್ಘಾವಧಿ ಕೆಲಸದ ಬಲಿಪಶುಗಳಲ್ಲಿ ಹೆಚ್ಚಿನವರು (ಶೇ72) ಪುರುಷರು. ಅದರಲ್ಲೂ ಮಧ್ಯವಯಸ್ಕರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ಕಂಡು ಬಂದಿದೆ.
ಯಾವ ದೇಶಗಳಲ್ಲಿ ಹೆಚ್ಚು ಪರಿಣಾಮ?
ಅಧ್ಯಯನದ ಪ್ರಕಾರ, ಆಗ್ನೇಯ ಏಷ್ಯಾ, ಪಶ್ಚಿಮ ಪೆಸಿಫಿಕ್ ದೇಶಗಳಲ್ಲಿ ವಾಸಿಸುವ ಮಧ್ಯವಯಸ್ಕ ಮತ್ತು ವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳಲ್ಲೂ ಇದರ ಪರಿಣಾಮ ಹೆಚ್ಚಾಗಿದೆ. ಒಟ್ಟು 194 ದೇಶಗಳ ದತ್ತಾಂಶವನ್ನು ಆಧರಿಸಿದ ಈ ಅಧ್ಯಯನವು, ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಹಾಗೂ ವಾರಕ್ಕೆ 35 ರಿಂದ 40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ, ವಾರದಲ್ಲಿ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವುದರಿಂದ ಪಾರ್ಶ್ವವಾಯು ಅಪಾಯ ಶೇ 35ಕ್ಕೂ ಹೆಚ್ಚು ಹಾಗೂ ಶೇ 17ರಷ್ಟು ಹೃದಯ ಬಡಿತದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಕಂಡು ಬಂದಿದೆ.
