ಹೈದರಾಬಾದ್: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಹೀಗಾಗಿ ಪ್ರತಿನಿತ್ಯ ಹೋಗಿ ವ್ಯಾಯಾಮ (ವರ್ಕೌಟ್) ಮಾಡುತ್ತಿದ್ದ ಜಿಮ್ಗಳು ಅನಿರ್ಧಷ್ಟಾವಧಿಗೆ ಮುಚ್ಚಲಾಗಿದೆ. ಆದ್ದರಿಂದ, ಕೆಲವರು ದೇಹವನ್ನು ಫಿಟ್ ಆಗಿ ಇಡಲು ಮನೆಯಲ್ಲೇ ಕೆಲವೊಂದು ವ್ಯಾಯಾಮ ಅಭ್ಯಾಸಗಳನ್ನು ಮಾಡುತ್ತಾರೆ.
ಯಾವುದೇ ತರಬೇತುದಾರರ ನಿರ್ದೇಶನಗಳಿಲ್ಲದೆ ನೀವು ಮನೆಯಲ್ಲಿ ಪ್ರಯೋಗಿಸುವ ಹೊಸ ಹೊಸ ವ್ಯಾಯಾಮ ಅಭ್ಯಾಸಗಳಿಂದ ನಿಮ್ಮ ದೇಹದ ಮೇಲೆ ಗಾಯಗಳಾಗಬಹುದು ಅಥವಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೀಗಾಗಿ, ಮನೆಯಲ್ಲೇ ವರ್ಕೌಟ್ ಮಾಡುವವರಿಗೆ ರಾಷ್ಟ್ರೀಯ ವೈಟ್ ಲಿಫ್ಟರ್ ಬಾರ್ಬೆಲ್ ಬಾಸ್ನ ಸ್ಥಾಪಕ ಪ್ರದೀಪ್ ಮೌರ್ಯ ಕೆಲವೊಂದು ಟಿಪ್ಸ್ಗಳನ್ನು ನೀಡುತ್ತಾರೆ. ಅವುಗಳನ್ನು ಪಾಲಿಸಿ ನಿಮ್ಮ ವ್ಯಾಯಾಮವನ್ನು ಇನ್ನಷ್ಟು ಆರೋಗ್ಯಕರವಾಗಿಸಿ.
ಸ್ವಚ್ಛ ಜಾಗವನ್ನು ಆಯ್ದುಕೊಳ್ಳಿ
ನೀವು ಯಾವುದೇ ವ್ಯಾಯಾಮ ಪ್ರಾರಂಭಿಸುವ ಮೊದಲು ಸ್ವಚ್ಛವಾದ ಜಾಗವನ್ನು ಆಯ್ದುಕೊಳ್ಳಿ. ನೀವು ವ್ಯಾಯಾಮ ಮಾಡುವ ಕೋಣೆ ಅಥವಾ ನೆಲದ ಮೇಲೆ ಯಾವುದೇ ರೀತಿಯ ಆಟಿಕೆ, ಚಪ್ಪಲಿ ಅನಗತ್ಯ ಪೀಠೋಪಕರಣಗಳು ಇದ್ದರೆ ಅವುಗಳನ್ನು ತೆರವುಗೊಳಿಸಿ. ಇಲ್ಲದಿದ್ದರೆ ಅವುಗಳು ನಿಮ್ಮ ವ್ಯಾಯಾಮಕ್ಕೆ ಅಡ್ಡಿಯುಂಟು ಮಾಡಬಹುದು.
ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ
ಯಾವುದೇ ವ್ಯಾಯಾಮ ಮಾಡುವಾಗ ನಿಮ್ಮ ದೇಹದ ಮಿತಿಗಳನ್ನು ತಿಳಿದುಕೊಳ್ಳಿ. ಪ್ರತಿಯೊಬ್ಬರ ದೇಹಕ್ಕೂ ಅದರದ್ದೇ ಅದ ಮಿತಿಗಳಿರುತ್ತವೆ. ನಿಮ್ಮ ದೇಹ ನೀಡುತ್ತಿರುವ ಸಂಕೇತಗಳನ್ನು ತಿಳಿದುಕೊಳ್ಳಿ, ಯಾವುದೇ ಕಷ್ಟಕರವಾದ, ದೇಹಕ್ಕೆ ಸಹಿಸಲಸಾಧ್ಯವಾದ ಪ್ರತಯ್ನಗಳನ್ನು ಮಾಡಬೇಡಿ.
ಸಾಕಷ್ಟು ವಾರ್ಮ್-ಅಪ್ ಮಾಡಿ
ದೇಹದ ಸ್ನಾಯುಗಳು ಕಠಿವಾಗಿರುತ್ತವೆ. ಅದನ್ನು ಸಡಿಲಗೊಳಿಸಿದರೆ ಸುಲಭವಾಗಿ ವ್ಯಾಯಾಮದಲ್ಲಿ ತೊಡಗಬಹುದು. ಆದ್ದರಿಂದ ಸಾಕಷ್ಟು ವಾರ್ಮ್ ಅಪ್ ಮಾಡಿ. ಆಗ ದೇಹದಲ್ಲಿ ನಿಮ್ಮ ರಕ್ತದ ಚಲನೆ ಹೆಚ್ಚುತ್ತದೆ, ಸ್ನಾಯುಗಳು ಸಡಿಲಗೊಳ್ಳುತ್ತವೆ. ನೀವು ಆರಾಮಾಗಿ ನಿಮ್ಮ ಅಭ್ಯಾಸಗಳನ್ನು ಮಾಡಬಹುದು.
ವ್ಯಾಯಾಮವನ್ನು ಅಳೆಯಿರಿ
ಪ್ರತಿದಿನ ನಿಮ್ಮ ವ್ಯಾಯಾಮದ ಮಟ್ಟವನ್ನು ಅಳೆಯಿರಿ. ಅದು ಹೇಗೆ ಎಂದರೆ, ನಿಮ್ಮ ದೇಹ ಎಷ್ಟು ಕಷ್ಟಕರವಾದ ವ್ಯಾಯಾಮ ಕ್ರಮಗಳನ್ನು ಅನುಸರಿಸಬಲ್ಲದು ಎಂಬುವುದನ್ನು ತಿಳಿದುಕೊಳ್ಳಿ. ನಿಯಮಿತ ಪುಷ್ ಅಪ್ ಕೆಲವರಿಗೆ ಕಷ್ಟವಾಗಬಹುದು. ಆ ಸಂದರ್ಭದಲ್ಲಿ, ಅವರು ವಾಲ್ ಪುಷ್ ಅಪ್ ಅಥವಾ ಮೊಣಕಾಲು ಪುಷ್ ಅಪ್ ಮಾಡಬಹುದು.
ಯಾವಾಗಲೂ ಸರಿಯಾದ ಕ್ರಮವನ್ನು ಅನುಸರಿಸಿ
ಸರಿಯಾದ ವರ್ಕೌಟ್ ಫಾರ್ಮ್ ಕಲಿಯದೆ ಯಾವುದೇ ಹೊಸ ವ್ಯಾಯಾಮವನ್ನು ಪ್ರಾರಂಭಿಸಬೇಡಿ. ನೀವು ಸರಿಯಾದ ಫಾರ್ಮ್ ಕಲಿಯಲು ಬಯಸಿದರೆ, ಆನ್‌ಲೈನ್ ತರಗತಿಗಳ ಮೂಲಕ ತರಬೇತುದಾರರ ಸಲಹೆ ಪಡೆಯಿರಿ.
ನಿಯಮಿತವಾಗಿ ನೀರು ಸೇವಿಸಿ
ವರ್ಕೌಟ್ ಮಾಡುವಾಗ ನಿಮ್ಮ ದೇಹದಿಂದ ಬೆವರು ಹೊರಬರುತ್ತವೆ. ಇದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗಬಹುದು. ಆದ್ದರಿಂದ ನಿಮ್ಮ ವ್ಯಾಯಾಮವನ್ಜು ಪ್ರಾರಂಭಿಸುವ ಮೊದಲು ಒಂದು ಲೋಟ ನೀರು ಕುಡಿಯಿರಿ. ಮತ್ತು ವ್ಯಾಯಾಮದ ಮಧ್ಯೆ ಪ್ರತೀ ಹತ್ತು ನಿಮಿಷಕ್ಕೆ ಒಂದು ಸಲ ನೀರು ಕುಡಿಯುತ್ತಿರಿ.
ನಿಮ್ಮ ವ್ಯಾಯಾಮವನ್ನು ಆನಂದಿಸಿ
ಕೇವಲ ವರ್ಕೌಟ್ ಮಾಡುವುದು ಮಾತ್ರವಲ್ಲದೆ, ನಿಮ್ಮ ವ್ಯಾಯಾಮವನ್ನು ಆನಂದಿಸಿ. ಅದಕ್ಕಾಗಿ ನಿಮ್ಮಂತೆ ವ್ಯಾಯಾಮದಲ್ಲಿ ಉತ್ಸಾಹವಿರುವ ಒಂದು ಸಮೂಹವನ್ನು ಆನ್‌ಲೈನ್ ಮುಖಾಂತರ ಪರಿಚಯ ಮಾಡಿಕೊಳ್ಳಿ. ಅವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿ.
ವ್ಯಾಯಾಮ (ವರ್ಕೌಟ್ )ಮತ್ತು ಗಾಯಗಳು ಜೀವನ ಕ್ರಮದ ಒಂದು ಭಾಗ. ನೀವು ನಮ್ಮ ತಜ್ಞ ಪ್ರದೀಪ್ ಮೌರ್ಯ ನೀಡಿರುವ ಈ ಮೇಲಿನ ಟಿಪ್ಸ್ಗಳನ್ನು ಅನುಸರಿಸಿದರೆ, ನಿಮ್ಮ ವ್ಯಾಯಾಮವನ್ನು ಇನ್ನಷ್ಟು ಸುಲಭ ಮತ್ತು ಸುಂದರವಾಗಿ ಮಾಡಬಹದು.