ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡಲು ಜನರು ನಾನಾ ತಂತ್ರಗಳನ್ನು ಮಾಡುತ್ತಾರೆ. ಬಿಸಿಯಾದ ಊಟ, ಕಾಪಿಡುವುದು, ಬೆಚ್ಚನೆಯ ಹೊದಿಕೆ.. ಹೀಗೆ ಹಲವಾರು ರೀತಿಯಲ್ಲಿ ಉಷ್ಣತೆಯನ್ನು ಪಡೆಯುತ್ತಾರೆ. ಹಣ್ಣುಗಳೂ ಕೂಡ ಉಷ್ಣ ಶಕ್ತಿಯನ್ನು ಹೊಂದಿವೆ. ಅದರಲ್ಲಿ ಒಂದು ಖರ್ಜೂರ.
ಖರ್ಜೂರ ಚಳಿಗಾಲದಲ್ಲಿ ಅತ್ಯುಪಯುಕ್ತವಾದ ಹಣ್ಣಾಗಿದೆ. ಇದರ ಸೇವನೆಯು ಚಳಿಗಾಲದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಖರ್ಜೂರವನ್ನು ಎಲ್ಲ ಋತುಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಆರೋಗ್ಯಕರ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ನಿತ್ಯ ಖರ್ಜೂರವನ್ನು ಸೇವಿಸುವುದು ಒಟ್ಟಾರೆ ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಒಳ್ಳೆಯದು ಎಂಬುದು ವೈದ್ಯರ ಸಲಹೆಯೂ ಹೌದು.
ಖರ್ಜೂರದಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?
ಖರ್ಜೂರವು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ನಮ್ಮ ತಜ್ಞರ ವಿವರಣೆ. ಇದು ಕಬ್ಬಿಣ, ಖನಿಜಗಳು, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ರಂಜಕ, ಪ್ರೋಟೀನ್, ಆಹಾರದ ಫೈಬರ್, ವಿಟಮಿನ್ ಬಿ 1, ಬಿ 2, ಬಿ 3, ಬಿ 5, ಎ 1 ಮತ್ತು ಸಿ ಮತ್ತು ಫ್ಲೋರಿನ್‌ಗಳನ್ನು ಹೇರಳವಾಗಿ ಹೊಂದಿದೆ.
ಇದು ಬಹಳಷ್ಟು ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಅನ್ನು ಸಹ ಒಳಗೊಂಡಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಚಳಿಗಾಲದಲ್ಲಿ ನಿತ್ಯ 4- 5 ಖರ್ಜೂರವನ್ನು ಸೇವಿಸಿದರೆ ದೇಹವನ್ನು ಬೆಚ್ಚಗಿಡಲು ಸಾಧ್ಯ. ಇದರೊಂದಿಗೆ, ತೂಕ ಹೆಚ್ಚಿಸಲು ಇಚ್ಛಿಸುವವರು ಖರ್ಜೂರವನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ರಾತ್ರಿ ವೇಳೆ ಹಾಲಿನಲ್ಲಿ ಕುದಿಸಿದ ಖರ್ಜೂರವನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳು ಹೇರಳ ಎಂಬುದು ತಜ್ಞರ ನುಡಿ.
ಖರ್ಜೂರದಿಂದಾಗುವ ಪ್ರಯೋಜನಗಳೇನು?
- ಕ್ಯಾಲ್ಸಿಯಂ, ಸೆಲೆನಿಯಮ್, ಮ್ಯಾಂಗನೀಸ್ ಮತ್ತು ತಾಮ್ರದ ಅಂಶ ಹೊಂದಿದ್ದು, ಮೂಳೆಗಳ ದೃಢತೆಗೆ ಸಹಕಾರಿ
- ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ರಾಮಬಾಣ
- ಖರ್ಜೂರದಲ್ಲಿ ಫೈಬರ್ ಕೂಡ ಇದ್ದು, ಮಲಬದ್ಧತೆ, ಆಮ್ಲೀಯತೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ
- ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ನಿಯಂತ್ರಣ, ಹೃದಯ, ಜೀವಕೋಶ ಹಾನಿ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ
- ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಬೆನ್ನು ನೋವು ಮತ್ತು ಕಾಲು ನೋವಿಗೆ ಖರ್ಜೂರದ ಸೇವನೆ ಒಳ್ಳೆಯದು
- ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಖರ್ಜೂರ ಸುಧಾರಿಸುತ್ತೆ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಮಾಡುತ್ತೆ
- ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಕಡಿಮೆ ಸೋಡಿಯಂ ಇದ್ದು, ನರಮಂಡಲಕ್ಕೆ ಒಳ್ಳೆಯ ಹಣ್ಣಾಗಿದೆ
- ಖರ್ಜೂರದ ನಿಯಮಿತ ಸೇವನೆಯಿಂದ ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು
- ಹೃದಯದ ಆರೋಗ್ಯವನ್ನು ಕಾಪಾಡುವುದರೊಂದಿಗೆ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಣೆ ನೀಡುತ್ತೆ
ಖರ್ಜೂರದ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಚಳಿಗಾಲದಲ್ಲಿ ಅಥವಾ ಹವಾಮಾನ ಬದಲಾದಾಗ ಇದರ ಸೇವನೆಯಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದರಿಂದ ಪಚನಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ.
ಇನ್ನು ಖರ್ಜೂರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಒಳಗೊಂಡಿದ್ದು, ನಮ್ಮ ಚರ್ಮವನ್ನು ನೈಸರ್ಗಿಕವಾಗಿ, ಆರೋಗ್ಯಕರವಾಗಿಡಲೂ ಸಹಾಯ ಮಾಡುತ್ತದೆ ಎಂದು ದೆಹಲಿ ಮೂಲದ ಪೌಷ್ಟಿಕತಜ್ಞೆ ಡಾ.ದಿವ್ಯಾ ಶರ್ಮಾ ತಿಳಿಸುತ್ತಾರೆ.