ನವದೆಹಲಿ : ಮುಂದಿನ ಕೆಲ ವರ್ಷಗಳಲ್ಲಿ ಜಾಗತಿಕ ಗೇಮಿಂಗ್ ಉದ್ಯಮವು ಎತ್ತರಕ್ಕೆ ಬೆಳೆಯುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದ ಸೈಬರ್ ಅಪರಾಧಗಳು ಮತ್ತು ಸೈಬರ್ ಬೆದರಿಕೆಗಳನ್ನು ಪೋಷಕರು, ಆಟಗಾರರು ಮತ್ತು ಸರ್ಕಾರದ ಒಪ್ಪಿಕೊಳ್ಳಬೇಕಿದೆ ಎಂದು ಸೈಬರ್ ಸುರಕ್ಷತೆ ಮತ್ತು ನೀತಿ ತಜ್ಞರ ಎನ್‌ಜಿಒ ಆಗಿರುವ ಸೈಬರ್ ಪೀಸ್ ಫೌಂಡೇಶನ್ ವರದಿ ಮಾಡಿದೆ.
"ಆನ್‌ಲೈನ್ ಗೇಮಿಂಗ್-ಸಮಸ್ಯೆಗಳು, ಅಂತಿಮ ಬಳಕೆದಾರರು, ಪೋಷಕರು ಮತ್ತು ಸರ್ಕಾರಿ ನಿಯಮಗಳಿಗೆ ಶಿಫಾರಸುಗಳು" ಎಂಬ ಶೀರ್ಷಿಕೆಯಡಿ ಸೈಬರ್ ಪೀಸ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಆನ್‌ಲೈನ್ ಗೇಮ್ಗಳು ಮಕ್ಕಳನ್ನು ಹೇಗೆ 'ಲೈಂಗಿಕ ಚಟುವಟಿಕೆ'ಗಳೆಡೆ ಒಡ್ಡುತ್ತದೆ, ಅಲ್ಲಿಂದ 'ಮಾದಕ ವಸ್ತು' ಸೇವೆನೆಯೆಡೆ, ಬಳಿಕ ಆನ್‌ಲೈನ್ 'ಅಶ್ಲೀಲತೆ'ಯೆಡೆ ಸೆಳೆಯುತ್ತದೆ ಎಂಬುದನ್ನು ವಿವರಿಸಿದೆ.
ಅಷ್ಟೇ ಅಲ್ಲ, ಈ ಚಟಗಳಿಂದಾಗಿ ಮಕ್ಕಳು ಸೈಬರ್ ಬೆದರಿಕೆ, ಲೈಂಗಿಕ ಕಿರುಕುಳಗಳಿಗೆ ಗುರಿಯಾಗುತ್ತಾರೆ. ಕೊನೆಯದಾಗಿ ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯಂತಹ ತೀವ್ರ ಸಮಸ್ಯೆಗಳಿಗೆ ಆನ್‌ಲೈನ್ ಗೇಮಿಂಗ್ ಪ್ರಚೋದಿಸುತ್ತದೆ. ಆನ್‌ಲೈನ್ ಗೇಮ್ಗಳು ಮಾನಸಿಕ ಒತ್ತಡ ಉಂಟು ಮಾಡುವುದರ ಜೊತೆಗೆ ಆರೋಗ್ಯದ ಮೇಲೆ ನಾನಾ ಪರಿಣಾಮಗಳನ್ನು ಬೀರುತ್ತವೆ ಎಂಬುದು ಖಚಿತವಾಗಿದೆ.
ಹೆಚ್ಚಿನ ಓದಿಗೆ: ಶರ ವೇಗದಲ್ಲಿ ಸಾಗುತ್ತಿದೆ ಇ-ಗೇಮ್ ಗೀಳು: ನಿತ್ಯ ಚಟವಾಗುವತ್ತ ವಿಡಿಯೋ ಗೇಮ್!
ಹೆಚ್ಚಿನ ಆಟಗಳಿಗೆ ಆಟಗಾರರು ದೀರ್ಘಾವಧಿಯವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಈ ಅಭ್ಯಾಸವು ರಕ್ತನಾಳದ ಥ್ರಂಬೋಸಿಸ್, ಕ್ಯಾನ್ಸರ್, ಹೃದ್ರೋಗ, ಪಿತ್ತಜನಕಾಂಗದ ಕಾಯಿಲೆ, ಕಾರ್ಪಲ್ ಟನಲ್ ಸಿಂಡ್ರೋಮ್ನಂತಹ ಗಂಭೀರ ಸಮಸ್ಯೆಗಳಿಗೆ ಮಕ್ಕಳನ್ನು ದೂಡುತ್ತವೆ.
ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನ ನೀಲಿ ಕಿರಣಗಳಿಗೆ ನಿರಂತರ ಒಡ್ಡಿಕೊಳ್ಳುವುದರಿಂದ ಕಣ್ಣುಗಳಿಗೆ ಹಾನಿಯಾಗುವ ಅಪಾಯ ಹೆಚ್ಚುತ್ತದೆ. ಇದು ನಿದ್ರೆಯ ಅವಧಿಗೆ ಅಡ್ಡಿಪಡಿಸುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಅನೇಕ ಮಲ್ಟಿಪ್ಲೇಯರ್ ಗೇಮ್ಗಳನ್ನು ನಾವು ಹಣ ಕೊಟ್ಟು ಆ್ಯಪ್ಗಳನ್ನ ಖರೀದಿಸಬೇಕಾಗುತ್ತದೆ. ಇದನ್ನು ಅರಿತಿರುವ ಸೈಬರ್ ಖದೀಮರು ಪೈರೇಟೆಡ್ ಗೇಮ್ಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ. ಈ ಮೂಲಕ ಹದಿಹರೆಯದವರು ತಮ್ಮ ಹಣವನ್ನು ಮತ್ತಷ್ಟು ಕಳೆದುಕೊಳ್ಳುತ್ತಾರೆ. ಇದನ್ನು ಮನಿ ಲಾಂಡರಿಂಗ್‌ಗೆ ಬಳಸಲಾಗುತ್ತದೆ ಎಂದು ಸೈಬರ್ ಪೀಸ್ ಫೌಂಡೇಶನ್ ಹೇಳಿದೆ.
ಸೈಬರ್ ಖದೀಮರಿಂದಾಗಿ ಗೇಮಿಂಗ್ ಉದ್ಯಮವು 2017ರ ನವೆಂಬರ್ ಮತ್ತು 2019ರ ಮಾರ್ಚ್ ಮಧ್ಯದಲ್ಲಿ 12 ಬಿಲಿಯನ್ ಸೈಬರ್ ದಾಳಿಗಳಿಗೆ ತುತ್ತಾಗಿದೆ.