ತಂತ್ರಜ್ಞಾನ ಹೆಚ್ಚಿದಂತೆ ಎಲ್ಲರೂ ಇಂಟರ್ನೆಟ್ನ ಬಳಕೆಯನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ. ಅದರಲ್ಲೂ ಗೂಗಲ್ ಅನ್ನು ಬಳಸದವರೇ ಇಲ್ಲ ಎಂದು ಹೇಳಬಹುದು. ಮೆಸೇಜ್ಗಳನ್ನು ಕಳುಹಿಸಲು G-mail, ಸ್ಥಳಗಳನ್ನು ಹುಡುಕಲು G-Map, ಮಾಹಿತಿಯನ್ನು ಸಂಗ್ರಹಿಸಲು ಗೂಗಲ್ ಡ್ರೈವ್, ಫೋಟೋಗಳನ್ನು ಸಂಗ್ರಹಿಸಲು ಗೂಗಲ್ ಫೋಟೋ ಮುಂತಾದವುಗಳನ್ನು ಬಳಸುತ್ತೇವೆ. ಈ ಎಲ್ಲಾ ಗೂಗಲ್ ಉತ್ಪನ್ನಗಳಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹ ಮಾಡಿರುತ್ತೇವೆ.
ಇವುಗಳನ್ನು ಬಳಸಲು ಪಾಸ್ವರ್ಡ್ ಕೂಡಾ ಇಟ್ಟಿರುತ್ತೇವೆ. ಒಂದು ವೇಳೆ ನಾವು ಸಾವನ್ನಪ್ಪಿದರೆ ಅದರಲ್ಲಿನ ಮಾಹಿತಿ ಏನಾಗುತ್ತವೆ?. ಅದರಲ್ಲಿ ನಾವು ಸಂಗ್ರಹಿಸಿಟ್ಟುಕೊಂಡ ಫೋಟೋಗಳು, ವಿಡಿಯೋಗಳು ಕತೆ ಏನಾಗುತ್ತದೆ. ಈ ರೀತಿಯ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ..? ಒಂದು ವೇಳೆ ಆ ಪ್ರಶ್ನೆಗಳು ನಿಮ್ಮನ್ನು ಕಾಡಿದರೆ, ಅದಕ್ಕೂ ಕೂಡಾ ಗೂಗಲ್ ಪರಿಹಾರ ನೀಡುತ್ತದೆ.
ಜಿ-ಮೇಲ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್, ಗೂಗಲ್ ಫೋಟೋಸ್ ಅನ್ನು ಬಳಸಲು ಸಾಮಾನ್ಯವಾಗಿ ಒಂದು ಗೂಗಲ್ ಖಾತೆ ತೆರೆಯಲೇಬೇಕಿರುತ್ತದೆ. ವಿವಿಧ ಉದ್ದೇಶಗಳಿಗಾಗಿ ನಾವು ಈ ಖಾತೆಗಳನ್ನು ತೆರೆದಿರುತ್ತೇವೆ. ಬಳಕೆದಾರ ಮೃತಪಟ್ಟ ನಂತರ ದೀರ್ಘಕಾಲದವರೆಗೆ ಬಳಸದೇ ಇರುವ ಖಾತೆಗಳನ್ನು ಅಥವಾ ಬದುಕಿದ್ದರೂ ದೀರ್ಘಕಾಲದವರೆಗೆ ಬಳಸದ ಖಾತೆಗಳನ್ನು ಗೂಗಲ್ ನಿಷ್ಕ್ರಿಯಗೊಳಿಸುತ್ತದೆ. ಆದರೂ ಎರಡು ಅವಕಾಶಗಳನ್ನು ಗೂಗಲ್ ಬಳಕೆದಾರರಿಗೆ ನೀಡುತ್ತದೆ.
ಗೂಗಲ್ ಉತ್ಪನ್ನಗಳ ಡೇಟಾವನ್ನು ನೋಡಲು ಬೇರೆ ವ್ಯಕ್ತಿಯನ್ನು ನೇಮಿಸುವ ಅವಕಾಶದ ಜೊತೆಗೆ ಗೂಗಲ್ ಉತ್ಪನ್ನಗಳಲ್ಲಿನ ಪೂರ್ತಿ ಡೇಟಾವನ್ನು ಡಿಲೀಟ್ ಮಾಡುವ ಅವಕಾಶವನ್ನೂ ಗೂಗಲ್ ಬಳಕೆದಾರನಿಗೆ ನೀಡುತ್ತದೆ. ಬಳಕೆದಾರನೊಬ್ಬ ತನ್ನ ಖಾತೆಯನ್ನು ಇಂತಿಷ್ಟು ದಿನಗಳವರೆಗೆ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ myaccount.google.com/inactive ವೆಬ್ಪುಟಕ್ಕೆ ತೆರಳಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಗೆ ಜಿ-ಮೇಲ್ ಮತ್ತು ಪಾಸ್ವರ್ಡ್ಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.
ಬೇರೊಬ್ಬರೊಂದಿಗೆ ಮಾಹಿತಿ ಹಂಚಿಕೊಳ್ಳಲು: ಸೆಟ್ಟಿಂಗ್ಸ್ ಮೂಲಕ ಖಾತೆಯನ್ನು ಗರಿಷ್ಠ 18 ತಿಂಗಳವರೆಗೆ ನಿಷ್ಕ್ರಿಯವಾಗಿರಿಸಿಕೊಳ್ಳಬಹುದು. ಅದರ ನಂತರವೂ ಬಳಕೆದಾರ ಗೂಗಲ್ ಖಾತೆಯನ್ನು ಬಳಸದಿದ್ದರೆ, ಯಾರೊಂದಿಗೆ ಡೇಟಾವನ್ನು ಹಂಚಿಕೊಳ್ಳಬಹುದು ಎಂದು ಕೇಳುತ್ತದೆ. ಒಂದು ವೇಳೆ ನಿಮಗೆ ಒಪ್ಪಿಗೆ ಇದ್ದರೆ ಸುಮಾರು 10 ಮಂದಿಯೊಂದಿಗೆ ಗೂಗಲ್ ಡ್ರೈವ್, ಗೂಗಲ್ ಮ್ಯಾಪ್, ಗೂಗಲ್ ಫೋಟೋಸ್ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಅವರ ಮೇಲ್ ಐಡಿಯನ್ನು ನೀವು ನಮೂದಿಸಬೇಕಾಗುತ್ತದೆ.
ಈ ಆಯ್ಕೆಯನ್ನು ನೀವು ಆಯ್ಕೆ ಮಾಡಿಕೊಂಡರೆ ಖಾತೆ ನಿಷ್ಕ್ರಿಯಗೊಂಡ ಬಳಿಕ, ನೀವು ನಮೂದಿಸಿರುವ ಇ-ಮೇಲ್ಗೆ ನಿಮ್ಮ ಮಾಹಿತಿ ರವಾನೆಯಾಗುತ್ತದೆ ಅವರು ನೀವು ಸಂಗ್ರಹಿಸಿಟ್ಟ ಮಾಹಿತಿ ನೋಡಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.
ಮಾಹಿತಿ ಹಂಚಿಕೊಳ್ಳಲು ಬಯಸದಿದ್ದರೆ: ನಿಮ್ಮ ಗೂಗಲ್ ಖಾತೆಯ ಡೇಟಾವನ್ನು ನೀವು ಯಾರೊಂದಿಗೂ ಹಂಚಿಕೊಳ್ಳಲು ಬಯಸದಿದ್ದರೆ, ಯಾರ ಇ - ಮೇಲ್ ಐಡಿಯನ್ನೂ ನಮೂದಿಸುವ ಅಗತ್ಯವಿರುವುದಿಲ್ಲ. ಸೆಟ್ಟಿಂಗ್ಸ್ನಲ್ಲಿ ಡೇಟಾವನ್ನು ಶಾಶ್ವತವಾಗಿ ಅಳಿಸುವ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಖಾತೆಯನ್ನು ನಿಷ್ಕ್ರಿಯಗೊಳಿಸಿದ ಮೂರು ತಿಂಗಳ ಬಳಿಕ ಖಾತೆಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಅಳಿಸಲಾಗುತ್ತದೆ.
ಒಂದು ವೇಳೆ ಬಳಕೆದಾರ ಇದ್ಯಾವುದೇ ಸೆಟ್ಟಿಂಗ್ ಮಾಡದೇ ಸಾವನ್ನಪ್ಪಿದರೆ, ದೀರ್ಘಕಾಲದವರೆಗೆ ಖಾತೆಯಲ್ಲಿ ಚಟುವಟಿಕೆಗಳು ಕಂಡು ಬರದಿದ್ದರೆ, ಗೂಗಲ್ ತಾನೇ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಎಲ್ಲಾ ಮಾಹಿತಿಯು ಅಳಿಸುತ್ತದೆ.
ಇದನ್ನೂ ಓದಿ: ಅಂಬಾನಿ ಹಿಂದಿಕ್ಕಿ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಗಿಟ್ಟಿಸಿಕೊಂಡ ಅದಾನಿ