ಯುಗಾದಿ ಬಂದರೆ ಸಾಕು ಗಿಡ ಮರಗಳು ಚಿಗುರೊಡೆದು ನವ ವಸಂತವನ್ನು ಸ್ವಾಗತಿಸುತ್ತವೆ. ಹಳೆಯ ಕಹಿಯೊಂದಿಗೆ ಹೊಸ ಹರುಷದೊಂದಿಗೆ ನವ ವಸಂತಕ್ಕೆ ಕಾಲಿಡುವ ಸಂಕೇತ ಯುಗಾದಿ. ಯುಗ+ಆದಿ=ಯುಗಾದಿ ಪದದಲ್ಲೇ ಹೊಸತನವಿರುವ ಹಬ್ಬ. ಇದು ಚೈತ್ರ ಮಾಸದ ಮೊದಲ ದಿನ.
ಯುಗಾದಿ ಅಂದಾಕ್ಷಣ ಮೊದಲಿಗೆ ನೆನಪಾಗುವುದು ಬೇವು, ಬೆಲ್ಲ. ಜೀವನದಲ್ಲಿ ಕಷ್ಟ, ಸುಖ ಎರಡು ಬೇವು-ಬೆಲ್ಲದಂತೆ. ಒಮ್ಮೆ ಏಳು ಇನ್ನೊಮ್ಮೆ ಬೀಳು ಎರಡನ್ನು ಸಮವಾಗಿ ಸ್ವೀಕರಿಸಬೇಕೆಂಬ ಪಾಠ ಸಾರುವ ಹಬ್ಬವೇ ಯುಗಾದಿ.
ಬೇವು-ಬೆಲ್ಲ ಏಕೆ?
ಸಾಮಾನ್ಯವಾಗಿ ಯುಗಾದಿ ಬರುವುದು ಬೇಸಿಗೆ ಕಾಲದಲ್ಲಿ. ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಅಲ್ಲದೆ ಬಿಸಿಲಿನಿಂದ ಒಣ ಕಫ ಜಾಸ್ತಿ. ದೇಹ ತಂಪಾಲು, ಉಷ್ಣತೆ ಶಮನಗೊಳ್ಳಲು ಬೇವು-ಬೆಲ್ಲ ಸಹಾಯಕ. ಬೆಲ್ಲ ರಕ್ತ ಶುದ್ಧಿಕರಣದ ಜೊತೆ, ದೇಹದಲ್ಲಿ ಒಣ ಕಫವನ್ನು ಹೊರಹಾಕುತ್ತದೆ. ಅಲ್ಲದೇ ಬೇವು ದೇಹದಲ್ಲಿನ ಶಾಖವನ್ನು ನೀಗಿಸುತ್ತದೆ. ಬೇವು ಸರ್ವ ರೋಗಕ್ಕೆ ರಾಮಬಾಣದಂತೆ.
ಎಣ್ಣೆ ಸ್ನಾನದ ಮಹತ್ವ
ದೇಹಕ್ಕೆ ಹರಳೆಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡುವುದು ನಿಯಮ. ಹರಳಣ್ಣೆ ದೇಹವನ್ನ ಗಟ್ಟಿಗೊಳಿಸುವುದಲ್ಲದೇ, ಅನೇಕ ಚರ್ಮ ರೊಗಗಳನ್ನು ನಿವಾರಿಸುತ್ತದೆ. ಗಾಯ, ಚರ್ಮದ ಮೇಲಾದ ಕಲೆಗಳನ್ನು ಹೋಗಲಾಡಿಸಲು ಹರಳೆಣ್ಣೆ ಉಪಕಾರಿ. ಸಣ್ಣ-ಪುಟ್ಟ ಉಳುಕಿದ ನೋವುಗಳನ್ನು ಸಹ ಕಡಿಮೆ ಮಾಡುತ್ತದೆ. ಹರಳಣ್ಣೆ ಹಚ್ಚಿ ದೇಹಕ್ಕೆ ಮಸಾಜ್ ಮಾಡಿ 30-35 ನಿಮಿಷಗಳ ನಂತರ ಅಭ್ಯಂಗ ಸ್ನಾನ ಅಂದರೆ ಹಿತವಾದ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅಲ್ಲದೆ ರಿಲ್ಯಾಕ್ಸ್ ಫೀಲ್ ಆಗುತ್ತದೆ.
ಮನೆಗೆ ತಳಿರು-ತೋರಣ
ಮಾವಿನ ತೋರಣ ಎಂಬುದು ಒಟ್ಟು ಕುಟುಂಬದ ಸಂಕೇತ. ಹಸಿರಾದ ಮಾವಿನ ಎಲೆಗಳನ್ನು ತಂದು ಅದನ್ನು ತೋರಣ ಕಟ್ಟಿ ಮನೆಯ ದ್ವಾರ ಬಾಗಿಲಿಗೆ ಹಾಕುವುದು ಪದ್ಧತಿ. ಈ ಹಸಿರಾದ ಮಾವಿನ ಎಲೆ ಶುಭ ಸೂಚನೆಯ ಸಂಕೇತ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಸಕಾರಾತ್ಮಕ ವಾತಾವರಣ ಚೆಲ್ಲುತ್ತದೆ. ಕೆಟ್ಟ ದೃಷ್ಟಿಯಿಂದ ಮನೆಯನ್ನು, ಕುಟುಂಬವನ್ನು ರಕ್ಷಿಸುತ್ತದೆ.
ಮನೆಯ ಮುಂದೆ ಅಂದದ ರಂಗೋಲಿ
ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ. ರಂಗೋಲಿ ಇಲ್ಲದ ಮನೆ ಎಂದರೆ ಅದು ಅಶುಭ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರುಬರುತ್ತಿರಲಿಲ್ಲವಂತೆ.
ಪಂಚಾಂಗ ಶ್ರವಣ
ಈ ಆಚರಣೆ ಹೆಚ್ಚಾಗಿ ಮನೆಗಳಲ್ಲಿ ಸೂರ್ಯಾಸ್ತದ ಬಳಿಕ ನಡೆಸುವರು. ಹೊಸದಾಗಿ ತಂದ ಪಂಚಾಂಗವನ್ನು ಇಟ್ಟು. ಅದನ್ನು ಹೂಗಳಿಂದ ಅಲಂಕರಿಸಿ, ಕುಂಕುಮ, ಅರಿಶಿಣ ಮತ್ತು ಅಕ್ಷತೆ ಹಾಕಿ ಪೂಜೆ ಮಾಡಲಾಗುತ್ತದೆ. ಕುಟುಂಬದ ಹಿರಿಯ ವ್ಯಕ್ತಿಯು ಈ ಪಂಚಾಂಗವನ್ನು ಪಠಿಸುವ ಮೂಲಕ ಮುಂದಿನ ದಿನಗಳಲ್ಲಿನ ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಹೇಳುತ್ತಾರೆ.
ಹೀಗೆ ಯುಗಾದಿ ಪ್ರತಿ ವರ್ಷಕ್ಕೊಂದು ಹೊಸ ಜನ್ಮ, ಹೊಸದಾದ ನೆಲೆ ಕಂಡುಕೊಳ್ಳುವ ಪಾಠ ಸಾರುತ್ತದೆ.