ಕೊಲ್ಲಂ (ಕೇರಳ) : ಮಲಗುವ ಕೋಣೆಯಲ್ಲಿ ತನ್ನ ಪತ್ನಿಗೆ ಹಾವಿನಿಂದ ಕಚ್ಚಿಸಿ ಆಕೆಯ ಸಾವಿಗೆ ಪಾಪಿ ಪತಿಯೋರ್ವ ಕಾರಣವಾಗಿರುವ ಘಟನೆ ಕೇರಳದಲ್ಲಿ ನಡೆದೆ. ಉತ್ರಾ ಮೃತ ದುರ್ದೈವಿ. ಮೇ 7 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಮಾನುಷವಾದ ಕೃತ್ಯದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಎರ್ರಂ ಮೂಲದ ಪತ್ನಿ ಉತ್ರಾ ಅವರ ಅಸ್ವಾಭಾವಿಕ ಸಾವಿನ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು, ಪತಿ ಸೂರಜ್ ಮತ್ತು ಇತರೆ ನಾಲ್ವರವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಪತ್ನಿ ಬೆಡ್ ರೂಂನಲ್ಲಿ ಮಲಗಿದ್ದಾಗ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಕೃತ್ಯಕ್ಕಾಗಿ ಕಲ್ಲುವಾತುಕ್ಕಲ್ ಮೂಲದ ಹಾವು ಹಿಡಿಯುವ ಸುರೇಶ್ ಎಂಬಾತನಿಂದ ಆರೋಪಿ ಸೂರಜ್ 10,000 ರೂ.ಗೆ ಹಾವನ್ನು ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾವು ಮಾರಾಟ ಮಾಡಿದವನೊಂದಿಗೆ ಆರೋಪಿ ನಡೆಸಿದ ದೂರವಾಣಿ ಸಂಭಾಷಣೆಯ ಮಾಹಿತಿ ಕೇರಳದ ಅಪರಾಧಿ ದಳದ ಅಧಿಕಾರಿಗಳಿಗೆ ಲಭ್ಯವಾಗಿದೆ.
ಮಾ. 2 ರಂದು ಪತ್ನಿಗೆ ಮೊದಲ ಬಾರಿ ಹಾವಿನಿಂದ ಕಚ್ಚಿಸಿದ ಬಳಿಕ ಅಡೂರ್‌ನ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 92 ಸವರನ್ ಚಿನ್ನವನ್ನು ತೆಗೆದುಕೊಂಡಿದ್ದಾನೆ. ಆಕೆ ತನ್ನ ತವರು ಮನೆಗೆ ಹೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಮೇ 7 ರಂದು ಎರಡನೇ ಬಾರಿ ಹಾವಿನಿಂದ ಕಚ್ಚಿಸಿದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.