ಬರಾಬಂಕಿ(ಉತ್ತರ ಪ್ರದೇಶ): ತಾಯಿ ಮತ್ತು ಮಗಳು ಮನೆಯಲ್ಲೇ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಇಬ್ಬರೂ ಕೊಲೆಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಸುಬೇಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಸೋಮವಾರ ಬೆಳಗ್ಗೆ ಮಹಿಳೆ ಮತ್ತು ಮಗಳ ಶವಗಳು ಪತ್ತೆಯಾಗಿವೆ. ಇನ್ನೊಂದೆಡೆ ಮೃತ ಮಹಿಳೆಯ ಇನ್ನೊಬ್ಬಳು ಮಗಳು ಗಾಯಗೊಂಡಿದ್ದಳು ಎಂದು ಬರಾಬಂಕಿ ಎಸ್‌ಪಿ ಅರವಿಂದ್ ಚತುರ್ವೇದಿ ತಿಳಿಸಿದ್ದಾರೆ.
ಮನೆ ಒಳಗಿನಿಂದ ಲಾಕ್ ಆಗಿತ್ತು. ಮನೆಯ ತಾರಸಿ ಮೇಲೆ ಶವಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಯಾರೋ ಒಬ್ಬರು ಮನೆಯೊಳಗೆ ಪ್ರವೇಶಿಸಿ ಕೊಲೆ ಮಾಡಿರುವಂತೆ ಕಂಡು ಬಂದಿದೆ. ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಹೇಳಿದ್ದಾರೆ.
ಮೃತ ಮಹಿಳೆಯ ಪತಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಹಿಳೆ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕಳೆದ ಭಾನುವಾರ ರಾತ್ರಿ ಅವಳು ತನ್ನ ಅತ್ತಿಗೆಯ ಮನೆಯಲ್ಲಿ ಊಟ ಮಾಡಿ ರಾತ್ರಿ 9:30ರ ಸುಮಾರಿಗೆ ತನ್ನ ನಿವಾಸಕ್ಕೆ ಮರಳಿದ್ದಳು. ಮರುದಿನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.