ಬೆಂಗಳೂರು: ನಿವೇಶನ ಖರೀದಿಸಲು ಕೂಡಿಟ್ಟಿದ್ದ 40 ಲಕ್ಷ ರೂ. ಹಣಕ್ಕಾಗಿ, ಗಂಡನಿಗೆ ಕೊರೊನಾ ಬಂದಿರುವುದಾಗಿ ಹೇಳಿ ಸಹಚರರ ಮೂಲಕ ಪತ್ನಿಯೇ ಕಿಡ್ನಾಪ್ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪತ್ನಿ ಸೇರಿದಂತೆ ಐವರು ಅಪಹರಣಕಾರರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ತ್ಯಾಗರಾಜನಗರ ನಿವಾಸಿ ಸೋಮಶೇಖರ್ ನೀಡಿದ ದೂರಿನ ಮೇರೆಗೆ ಪತ್ನಿ ಸುಪ್ರಿಯಾ, ಲತಾ, ಗಗನ್, ಬಾಲಾಜಿ ತೇಜಸ್, ಕಿರಣ್ ಕುಮಾರ್ ಎಂಬುವವರನ್ನ ಬಂಧಿಸಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸೋಮಶೇಖರ್ ರಾಜಧಾನಿಯಲ್ಲಿ ನಿವೇಶನ ಖರೀದಿಸಲು 40 ಲಕ್ಷ ರೂ. ಹಣ ಕೂಡಿಟ್ಟಿದ್ದರು. ಈ ಹಣ ಲಪಾಟಯಿಸಲು ಮುಂದಾದ ಪತ್ನಿ ಸುಪ್ರಿಯಾ, ಸಂಬಂಧಿಕರ ಮೂಲಕ ಅಪಹರಿಸಲು ಮುಂದಾಗಿ ಜೈಲು ಪಾಲಾಗಿದ್ದಾರೆ.
ಕಳೆದ ನ.1 ರಂದು ಗಂಡನಿಗೆ ಕರೆ ಮಾಡಿ ಹೊಟ್ಟೆ ನೋವಾಗುತ್ತಿದ್ದು, ಮಾತ್ರೆ ತೆಗೆದುಕೊಂಡು ಬರುವಂತೆ ಪತ್ನಿ ಸುಪ್ರಿಯಾ ಹೇಳಿದ್ದಾಳೆ. ಪತಿ ಸೋಮಶೇಖರ್ ಮೆಡಿಕಲ್ ಶಾಪ್ಗೆ ಹೋಗಿ ಮಾತ್ರೆ ಖರೀದಿಸಿ ನಡೆದುಕೊಂಡು ಹೋಗುವಾಗ ಏಕಾಏಕಿ ಆ್ಯಂಬುಲೆನ್ಸ್ನಲ್ಲಿ ಗಗನ್ ಸಹಚರರು ಬಂದಿದ್ದಾರೆ. ನಿಮಗೆ ಕೊರೊನಾ ಬಂದಿದೆ, ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಸುಳ್ಳು ಹೇಳಿದ್ದೀರಾ ಎಂದು ಬಲವಂತವಾಗಿ ಗಾಡಿ ಹತ್ತಿಸಿಕೊಂಡಿದ್ದಾರೆ. ಅಲ್ಲಿಂದ ಅಪಹರಿಸಿ ಚಾಮರಾಜನಗರ ತೋಟದ ಮನೆಯೊಂದಕ್ಕೆ ಕರೆತಂದಿದ್ದಾರೆ.
ಇದನ್ನೂ ಓದಿ: ಒಟ್ಟಿಗೆ ಪ್ರಯಾಣಿಸಿದ ಟಗರು - ರಾಜಾಹುಲಿ: ಒಂದೇ ವಿಮಾನದಲ್ಲಿ ಕೈ-ಕಮಲ ನಾಯಕರು
ನಿವೇಶನ ಖರೀದಿಸಲು ಕೂಡಿಟ್ಟಿರುವ 40 ಲಕ್ಷ ರೂಪಾಯಿ ನೀಡುವಂತೆ ಬಲವಂತ ಮಾಡಿ ಕೈ- ಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ. ಸ್ನೇಹಿತರಿಗೆ ಕರೆ ಮಾಡಿ 10 ಲಕ್ಷ ರೂ. ಹಣವನ್ನು ನೀಡುವಂತೆ ಸೋಮಶೇಖರ್ಗೆ ಅಪಹರಣಕಾರರು ಬೆದರಿಸಿದ್ದರು. ಸ್ನೇಹಿತರೊಬ್ಬರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ನೀಡುವಂತೆ ಸೋಮಶೇಖರ್ ಮೂಲಕ ಹೇಳಿಸಿದ್ದರು. ಇದರಿಂದ ಸಂಶಯಗೊಂಡ ಸೋಮಶೇಖರ್ ಮಿತ್ರರು, ಸುಪ್ರಿಯಾ ಮನೆಗೆ ಹೋಗಿ ವಿಚಾರಿಸಿದ್ದಾರೆ.
ಗಂಡನಿಗೆ ಕೊರೊನಾ ಬಂದಿದ್ದು, ಸಂಬಂಧಿ ಗಗನ್ ಎಂಬುವರು ಮಾಗಡಿ ರೋಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪತ್ನಿ ಸುಳ್ಳು ಹೇಳಿದ್ದಾಳೆ. ಇದನ್ನು ನಂಬದ ಸ್ನೇಹಿತರು ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಸುಪ್ರಿಯಾ ಮನೆಗೆ ಹೋಗಿ ವಿಚಾರಿಸಿದ್ದರು. ಅಪಹರಣ ವಿಚಾರವಾಗಿ ಪೊಲೀಸರು ಮನೆಗೆ ಬಂದು ಹೋಗಿರುವುದಾಗಿ ಗಗನ್ ಸಹಚರರಿಗೆ ಸುಪ್ರಿಯಾ ಮಾಹಿತಿ ನೀಡಿದ್ದಾಳೆ. ಇದರಿಂದ ಆತಂಕ್ಕಕ್ಕೆ ಒಳಗಾದ ಆರೋಪಿಗಳು ಸೋಮಶೇಖರ್ ನನ್ನು ಮನೆಗೆ ಕರೆ ತಂದು ಬಿಟ್ಟಾಗ, ಈತನ ಸ್ನೇಹಿತರು ಗಗನ್ ಹಾಗೂ ತಾಯಿ ಲತಾ ಇಬ್ಬರನ್ನು ಹಿಡಿದು ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದರು.
ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ ಲತಾ, ಸೋಮಶೇಖರ್ಗೆ ಕೊರೊನಾ ಬಂದಿದೆ ಎಂದು ಹೇಳಿ, ವೈದ್ಯಕೀಯ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಕಿರಣ್ ಕುಮಾರ್ ಎಂಬುವವರ ಮೂಲಕ ಸೋಮಶೇಖರ್ ಸೋಂಕಿತ ಎಂದು ಪ್ರಮಾಣಪತ್ರ ತೆಗೆದುಕೊಂಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ವಿವಾದಿತ ಗೋಡೆ ಬರಹ ಪ್ರಕರಣ: ಇಬ್ಬರು ಆರೋಪಿಗಳ ಬಂಧನ