ಫರಿದಾಬಾದ್(ಹರಿಯಾಣ) : ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ಶುಕ್ರವಾರ 8ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹಾಗೂ ಕುಖ್ಯಾತ ರೌಡಿ ವಿಕಾಸ್ ದುಬೆ ಕೂದಲೆಳೆ ಅಂತರದಲ್ಲಿ ಪರಾರಿ ಆಗಿದ್ದಾನೆ.
ಫರಿದಾಬಾದ್ ಹೋಟೆಲ್‌ವೊಂದರಲ್ಲಿ ವಿಕಾಸ್ ದುಬೆ ಇರುವುದು ಗಮನಕ್ಕೆ ಬರುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ಧಾವಿಸುವ ಕೆಲ ಹೊತ್ತಿನ ಮುಂಚೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಳಿಕ ಹರಿಯಾಣ ಪೊಲೀಸರು ತೀವ್ರ ಕಟ್ಟೆಚ್ಚರಿಕೆ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ದೃಶ್ಯದಲ್ಲಿ ದುಬೆ ಹೋಟೆಲ್‌ನಲ್ಲಿ ನಿಂತಿದ್ದ. ಕಪ್ಪುಶರ್ಟ್, ಜೀನ್ಸ್ ಮತ್ತು ಮುಖವಾಡ ಧರಿಸಿದ್ದು ಸೆರೆಯಾಗಿದೆ.
ಮತ್ತೊಂದು ಸಿಸಿಟಿವಿಯಲ್ಲಿ ಅವನು ರಸ್ತೆ ಬದಿಯಲ್ಲಿ ಬ್ಯಾಗ್‌ನೊಂದಿಗೆ ನಿಂತು ವಾಹನಕ್ಕಾಗಿ ಕಾಯುತ್ತಿರುವುದು ಕಂಡು ಬಂದಿದೆ. ವಿಕಾಸ್ ದುಬೆ ಸಹಚರರಾದ ಪ್ರಭಾತ್ ಮಿಶ್ರಾ, ಅಂಕುರ್ ಮತ್ತು ಶ್ರವಣ್ ಎಂಬುವರನ್ನು ನಗರದ ನಾನಾ ಸ್ಥಳದಿಂದ ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಮಿಶ್ರಾ ಅವರಿಂದ ಎರಡು ಪಿಸ್ತೂಲ್ ಸೇರಿ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ವರದಿಗಳ ಪ್ರಕಾರ, ವಿಕಾಸ್ ದುಬೆ ಜನದಟ್ಟಣೆಯ ಬಡ್ಖಾಲ್ ಚೌಕ್ ಪ್ರದೇಶದಲ್ಲಿ ಇರುವ ಹೋಟೆಲ್‌ನಲ್ಲಿ ನಕಲಿ ಗುರುತಿನಡಿಯಲ್ಲಿ ತಂಗಿದ್ದರು ಎನ್ನಲಾಗುತ್ತಿದೆ.
ಹೋಟೆಲ್‌ನಲ್ಲಿ ತಂಗಿದ ಸುಳಿವು ಸಿಗುತ್ತಿದ್ದಂತೆ ರಾಜಸ್ಥಾನ್ ಸಿಐಎ, ಉತ್ತರಪ್ರದೇಶದ ಎಸ್‌ಟಿಎಫ್ ಮತ್ತು ಫರಿದಾಬಾದ್ ಸಿಐಎ ಹೋಟೆಲ್ ಮೇಲೆ ದಾಳಿ ನಡೆಸಿ ದುಬೆ ಅವರ ಸಹಾಯಕರನ್ನು ಬಂಧಿಸಿದ್ದಾರೆ.