ಮಂಗಳೂರು: ಯುವತಿಯರನ್ನು ಬಳಸಿಕೊಂಡು ಶ್ರೀ ಮಂತರಿಗೆ ಮೋಸ ಮಾಡಿ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕುಶಾಲ ನಗರದ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಬಂಧಿತ ಆರೋಪಿಗಳು. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಪೆರುಬುಲ್ಲಿ ಕೆರಿ ಕುಟ್ಯಾಟೂರ್ ನಿವಾಸಿ ದಿಲೀಪ್ ಟಿ. ಎಂಬವರ ಮೋಬೈಲ್ ಗೆ ಯುವತಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆ ಕೆಲಸಕ್ಕೆ ಜನ ಬೇಕಾಗಿದ್ದಲ್ಲಿ ಕಾಸರಗೋಡಿಗೆ ಬರಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ನೇಹಿತರಾದ ಜನಾರ್ದನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಕಾರಿನಲ್ಲಿ ಕಣ್ಣೂರಿನಿಂದ ಬಂದು ಯುವತಿಯನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಆ ಯುವತಿ, ರಾತ್ರಿ 12:30 ಸುಮಾರಿಗೆ ಕಾರಿನಲ್ಲಿ ಅರ್ಧ ಕೀ. ಮೀ. ದೂರದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋಗಿದ್ದಳು.
ಆಗ ಮನೆಯಲ್ಲಿ ಮತ್ತೊಬ್ಬ ಯುವತಿ ಇದ್ದು, ಅದೇ ಸಮಯಕ್ಕೆ ಇಬ್ಬರು ಗಂಡಸರು ಏಕಾಏಕಿ ಪ್ರವೇಶ ಮಾಡಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಆ ಬಳಿಕ ರೂಮಿನಲ್ಲಿ ಅಕ್ರಮವಾಗಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೊಲೀಸರಿಗೆ ಹಾಗೂ ಟಿ.ವಿ. ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಎಂದು ಹೇಳಿಕೊಂಡು ಬಂದ 3 ಜನ 10 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲವೆಂದು ತಿಳಿಸಿದಾಗ, ತನ್ನ ಹಾಗೂ ಜೊತೆಯಲ್ಲಿದ್ದವರ ಮೊಬೈಲ್ ಫೋನ್, ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡಿದ್ದಾರೆ ಎಂದು ದಿಲೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಮರುದಿನ ಬೆಳಗ್ಗೆ 10ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆಂದು ಹೇಳಿ ದೂರುದಾರರ ಇನ್ನೋವಾ ಕಾರಿನಲ್ಲಿ ರೆಸಾರ್ಟೊಂದಕ್ಕೆ ಬಂದು ಅಲ್ಲಿ ಎಲ್ಲರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದರು. ಆದರೆ, ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಈ ಬಗ್ಗೆ ದಿಲೀಪ್ ಟಿ., ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.