ಲಖನೌ: ಉತ್ತರ ಪ್ರದೇಶದ ಅನಾಮಿಕಾ ಶುಕ್ಲಾ ಎಂಬ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಏಕಕಾಲದಲ್ಲಿ 25 ಶಾಲೆಗಳಲ್ಲಿ ಪಾಠ ಮಾಡಿ, 13 ತಿಂಗಳಲ್ಲಿ ಒಂದು ಕೋಟಿ ಗಳಿಕೆ ಮಾಡಿದ್ದಾರೆ ಎಂದರೆ ನೀವು ನಂಬಲೇ ಬೇಕು!.
ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಪೂರ್ಣಾವಧಿಯ ವಿಜ್ಞಾನ ಶಿಕ್ಷಕಿಯಾಗಿರುವ ಇವರು, ಅಂಬೇಡ್ಕರ್ ನಗರ, ಬಾಗ್‌ಪತ್, ಅಲಿಗರ್, ಸಹರಾನ್‌ಪುರ ಮತ್ತು ಪ್ರಯಾಗರಾಜ್ ಸೇರಿ ಇತರ ಜಿಲ್ಲೆಗಳಲ್ಲಿರುವ ಶಾಲೆಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಹಾಜರಾತಿಯ ಡಿಜಿಟಲ್ ಅಂಕಿ-ಅಂಶಗಳ ಮಾಹಿತಿ ಕಲೆ ಹಾಕಿದಾಗ, 25 ಶಾಲೆಗಳಲ್ಲಿ ಅನಾಮಿಕಾ ಶುಕ್ಲಾ ಎಂಬ ಶಿಕ್ಷಕಿಯ ವೈಯಕ್ತಿಕ ವಿವರಗಳು ದೊರೆತಿದ್ದು, ವಂಚನೆ ಬೆಳಕಿಗೆ ಬಂದಿದೆ.
ಪ್ರೇರಣಾ ಆನ್ಲೈನ್ ಪೋರ್ಟಲ್ನಲ್ಲಿ ಪ್ರತಿನಿತ್ಯ ಸಹಿ ಮಾಡಬೇಕಿದ್ದು, 25 ಶಾಲೆಗಳಲ್ಲಿ ಹೇಗೆ ಹಾಜರಾತಿ ದಾಖಲಾಗಲು ಸಾಧ್ಯ? ಹೀಗಾಗಿ ಈ ಕುರಿತು ಸಮಗ್ರ ಮಾಹಿತಿ ಕಲೆಹಾಕಲು ತನಿಖೆ ನಡೆಸುತ್ತಿರುವುದಾಗಿ ಉತ್ತರ ಪ್ರದೇಶ ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ.
ದಾಖಲೆಗಳ ಪ್ರಕಾರ, ಈ ಶಿಕ್ಷಕಿ ಕಳೆದ 13 ತಿಂಗಳಿನಿಂದ ಈ ಎಲ್ಲಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2020ರ ಫೆಬ್ರವರಿ ತಿಂಗಳವರೆಗೆ ಈಕೆ ಸಂಪಾದಿಸಿದ್ದು ಬರೋಬ್ಬರಿ ಒಂದು ಕೋಟಿ ರೂ. ಅಲ್ಲದೇ ಎಲ್ಲಾ ಶಾಲೆಗಳಿಂದ ವೇತನ ಪಡೆಯಲು ಒಂದೇ ಬ್ಯಾಂಕ್ ಖಾತೆ ನೀಡಿದ್ದಾರೆ. ಮಾರ್ಚ್ನಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತಾದರೂ ಲಾಕ್ಡೌನ್ನಿಂದಾಗಿ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ತನಿಖೆ ಮುಂದುವರೆದಿದೆ ಎಂದು ರಾಯಬರೇಲಿಯ ಶಿಕ್ಷಣಾಧಿಕಾರಿ ಆನಂದ್ ಪ್ರಕಾಶ್ ಹೇಳಿದ್ದಾರೆ.