ವಿಜಯಪುರ: ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮ ಸಮೀಪದ ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಮೃತ ದುರ್ದೈವಿಗಳು
ತೆಪ್ಪದಲ್ಲಿ ಮೀನು ಹಿಡಿಯಲು ಮೂವರು ಮೀನುಗಾರರು ತೆರಳಿದ್ದರು. ಬಿರುಗಾಳಿಯಿಂದ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದ ಪರಿಣಾಮ ಮೂವರ ಪೈಕಿ ಅಕ್ಷಯ ಲಮಾಣಿ ಎಂಬುವವರು ಈಜಿ ದಡ ಸೇರಿದ್ದ.
ಪರಶುರಾಮ್ ಹಾಗೂ ರಮೇಶ ನಾಪತ್ತೆ ಆಗಿದ್ದರು. ಸತತ ಎರಡು ದಿನಗಳ ಕಾಲ ಶೋಧಿಸಿದ ಬಳಿಕ ಇಂದು ಶವಗಳು ಪತ್ತೆಯಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದಲ್ಲಿ ಮೂವರ ಸಾವು!
ಕೃಷ್ಣಾನದಿಯಲ್ಲಿ ಒಂದು ವಾರದಲ್ಲಿ ಮೀನು ಹಿಡಿಯಲು ಹೋದ ಮೂವರು ಮೃತಪಟ್ಟಿದ್ದಾರೆ. ಕಳೆದ ಜೂ.9ರಂದು ನಾಯನೆಗಲಿ ಗ್ರಾಮದ 60 ವರ್ಷದ ಯಮನಪ್ಪ ಕಟಗರ ಮೀನು ಹಿಡಿಯಲು ಹೋಗಿ ಮೊಸಳೆ ಬಾಯಿಗೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿದ್ದರು. ಕೃಷ್ಣಾ ನದಿಗೆ ಇಳಿಯಬಾರದು ಎನ್ನುವ ಮುನ್ನೆಚ್ಚರಿಕೆ ನೀಡಬೇಕಾಗಿರುವ ಕೃಷ್ಣಾ ಜಲ ನಿಗಮ ಮಂಡಳಿ ಮೌನ ವಹಿಸಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎಂದು ನದಿ ಪಾತ್ರದ ಗ್ರಾಮಸ್ಥರು ಆರೋಪಿಸಿದ್ದಾರೆ.