ಉತ್ತರ ಪ್ರದೇಶ: ಫೈನಾನ್ಶಿಯರ್‌ಗೆ ಬಾಕಿ ಹಣ ಪಾವತಿಸದ ಕಾರಣಕ್ಕೆ ಬೆಂಕಿ ಹಚ್ಚಿ ಟ್ರಕ್ ಮಾಲೀಕನನ್ನು ಜೀವಂತವಾಗಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಸತ್ಯ ಪ್ರಕಾಶ್ ರೈ (51)ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಕ್ರೀಟ್ ಲೋಡ್ ಮಾಡಿ ಟ್ರಕ್‌ನಲ್ಲಿ ಮಧ್ಯಪ್ರದೇಶದಿಂದ ಹಿಂದಿರುಗುವ ವೇಳೆ ಬದ್ಲಾಪುರ ಬಳಿ ಕಾರಿನಲ್ಲಿ ಬಂದ ಕೆಲವರು ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. ಫೈನಾನ್ಶಿಯರ್ನ ಏಜೆಂಟರ್ಗಳೆಂದು ಹೇಳಿ, ಕಳೆದ ಐದು ತಿಂಗಳುಗಳಿಂದ ಟ್ರಕ್ ಖರೀದಿಸಲು ಸತ್ಯ ಪ್ರಕಾಶ್ ರೈ ತೆಗೆದುಕೊಂಡ ಸಾಲದ ಮಾಸಿಕ ಕಂತು ಪಾವತಿಸದಿರಲು ಕಾರಣ ಹೇಳುವಂತೆ ಒತ್ತಾಯಿಸಿದ್ದಾರೆ. ಕೋವಿಡ್ ಲಾಕ್ಡೌನ್ ವೇಳೆ ಸಾಲ ಮರುಪಾವತಿಗೆ ಸರ್ಕಾರವು ನೀಡಿದ ಅವಧಿ ವಿಸ್ತರಣೆ ಕುರಿತು ರೈ ತಿಳಿಸಿದ್ದು, ಏಜೆಂಟರ್ಗಳು ಸುಮ್ಮನೇ ಹೋಗಿದ್ದಾರೆ ಎಂದು ರೈ ಅವರ ಜೊತೆಗಿದ್ದ ಅವರ ಮಗ ಶ್ಯಾಮಾನಂದ್ ಹೇಳಿದ್ದಾರೆ.
ಘನ್ಶ್ಯಾಂಪೂರ್ ಪ್ರದೇಶದಲ್ಲಿ ಮತ್ತೆ ಏಜೆಂಟರ್ಗಳು ಬಂದು ಟ್ರಕ್ ಅನ್ನು ತಡೆದಿದ್ದಾರೆ. ನಾನು ಟ್ರಕ್ ಒಳಗೇ ಕುಳಿತಿದ್ದೆ. ತಂದೆ ಕೂಗಾಡುತ್ತಿರುವುದನ್ನು ಕೇಳಿ ಕೆಳಗೆ ಇಳಿಯುವಷ್ಟರಲ್ಲಿ ಅವರು ನನ್ನ ತಂದೆಗೆ ಬೆಂಕಿ ಹಚ್ಚಿದ್ದರು. ಟ್ರಕ್ನಲ್ಲಿದ್ದ ಕಂಬಳಿಯನ್ನು ತಂದು ತಂದೆಗೆ ಹೊದಿಸಿ ಬೆಂಕಿ ನಂದಿಸಿದೆ ಎಂದು ಶ್ಯಾಮಾನಂದ್ ಘಟನೆ ಕುರಿತು ವಿವರಿಸಿದ್ದಾರೆ.
ಸ್ಥಳೀಯರು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಬದ್ಲಾಪುರ ಪೊಲೀಸ್ ಠಾಣಾಧಿಕಾರಿ ಶ್ರೀಜೇಶ್ ಯಾದವ್ ತಿಳಿಸಿದ್ದಾರೆ.