ಬಂಟ್ವಾಳ: ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಪ್ರತಿಷ್ಠಾಪಿಸಿರುವ ಶಿವನ ವಿಗ್ರಹದ ಸುತ್ತ ಶೂ ಧರಿಸಿ ವಿಗ್ರಹ ಪೀಠದ ಮೇಲೆ ಓಡಾಡಿ ಟಿಕ್ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕುರಿತು ಬಂದ ದೂರಿನಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 52/2020 ಕಲಂ 295 (ಎ), 297, 427 ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ. ಸಜೀಪನಡು ಗ್ರಾಮದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20), ಮೊಹಮ್ಮದ್ ಅರ್ಫಾಜ್ (20) ರವರನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಎಸ್.ಐ. ಪ್ರಸನ್ನ ನೇತೃತ್ವದ ತಂಡವು ಈ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದೆ.