ವಿಜಯಪುರ: ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಕಂಡುಬಂದಿದೆ.
ನಿನ್ನೆ ಸಾಯಂಕಾಲ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ, ಭಾರೀ ಮಳೆ, ಗಾಳಿಗೆ ತೆಪ್ಪ ಮುಗುಚಿ ಬಿದ್ದಿದೆ. ಮೂವರ ಪೈಕಿ ಅಕ್ಷಯ ಲಮಾಣಿ ಎನ್ನುವವರು ಈಜಿ ದಡ ಸೇರಿದ್ದಾರೆ. ಪರಶುರಾಮ ಲಮಾಣಿ (35) ಮತ್ತು ರಮೇಶ ಲಮಾಣಿ (38) ಪತ್ತೆಯಾಗಿಲ್ಲ. ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ್ ಎಂ. ಎಸ್. ಭಾಗವಾನ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಈ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.