ಉತ್ತರಪ್ರದೇಶ: ರಾತ್ರಿ ಮಲಗಿರುವ ವೇಳೆ ಗೊರಕೆ ಹೊಡೆಯುತ್ತಾರೆ ಎಂಬ ಕಾರಣಕ್ಕೆ ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ಪಿಲಿಭಿತ್ನ ಸೋಂಧಾ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ರಾಮ್ ಸ್ವರೂಪ್ (65) ಮೃತ ತಂದೆ. ರಾಮ್ ಸ್ವರೂಪ್ ಅವರ ಹಿರಿಯ ಮಗ ನವೀನ್ (28) ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾರಕಾಸ್ತ್ರದಿಂದ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ರಾಮ್ ಸ್ವರೂಪ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿ ನವೀನ್ ಸಹೋದರ ಮನೋಜ್ ನೀಡಿದ ದೂರಿನ ಮೇರೆಗೆ ನವೀನ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗೊರಕೆ ಹೊಡೆಯುತ್ತಾರೆಂದು ನವೀನ್ ತನ್ನ ತಂದೆಯನ್ನು ಪ್ರತಿನಿತ್ಯ ನಿಂದಿಸುತ್ತಿದ್ದನಲ್ಲದೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಸೆರಮಾವು ಉತ್ತರ ಪೊಲೀಸ್ ಠಾಣೆಯ ಎಸ್ಹೆಚ್ಒ ಪುಷ್ಕರ್ ಸಿಂಗ್ ಹೇಳಿದ್ದಾರೆ.