ಬೆಂಗಳೂರು: ನನಗೆ ಜ್ವರ ಬಂದಿದೆ ಸರ್, ದಯವಿಟ್ಟು ಕೊಂಚ ವಿಶ್ರಾಂತಿ ಪಡೆಯಲು ಬಿಟ್ಟುಬಿಡಿ ಎಂದು ಸಂಜನಾಳಂತೆ ಪೊಲೀಸರ ಜೊತೆ ನಾಟಕವಾಡಿದ್ದ ಆಕೆಯ ಆಪ್ತ ನಿಯಾಸ್ ಅಹಮದ್ನ ಅಸಲಿಯತ್ತು ವೈದ್ಯಕೀಯ ಪರೀಕ್ಷೆ ಬಳಿಕ ಬಯಲಾಗಿದೆ.
ನಿಯಾಸ್ ಅಹಮದ್ ಕೇರಳ ಮೂಲದ ನಟನಾಗಿದ್ದು, ಡ್ರಗ್ಸ್ ಪೆಡ್ಲರ್ ರಾಹುಲ್ ಮೂಲಕ ಸಂಜನಾಗೆ ಪರಿಚಯವಾಗಿದ್ದ. ಸಂಜನಾ ಜೊತೆ ಸಿನಿಮಾ ಅಂತ ಹಲವೆಡೆ ಸುತ್ತಾಡಿದ್ದ ಎನ್ನಲಾಗ್ತಿದೆ. ಬಿಡುಗಡೆಗೆ ಸಿದ್ಧವಾಗಿರುವ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ಈತ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದ A-13 ಆಗಿದ್ದಾನೆ.
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಜ್ವರವಿದೆ ಎಂದು ಹೇಳಿದ್ದಕ್ಕೆ ಆತನ ಮಾತು ನಂಬಿದ ಪೊಲೀಸರು, ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ನಿಯಾಸ್ಗೆ ಯಾವುದೇ ಜ್ವರ ಇಲ್ಲ ಮತ್ತು ಕೋವಿಡ್ ನೆಗೆಟಿವ್ ಎಂಬುದು ಗೊತ್ತಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಎರಡು ದಿನಕ್ಕೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುತ್ತದೆ.
![Sanjana close friend and actor Niyas ahamad investigate](https://etvbharatimages.akamaized.net/etvbharat/prod-images/8795393_539_8795393_1600075290923.png)
ಆರೋಪಿಗಳನ್ನು ವಶಕ್ಕೆ ಪಡೆಯುವ ಮುನ್ನವೂ ವೈದ್ಯಕೀಯ ಜೊತೆಗೆ ಕೋವಿಡ್ ಆ್ಯಂಟಿಜನ್ ಪರೀಕ್ಷೆ ಕೂಡ ಮಾಡಿಸಲಾಗುತ್ತದೆ. ಅಲ್ಲದೇ ನಿಯಾಸ್ ಫಿಟ್ ಆಗಿದ್ದು, ಯಾವುದೇ ಸಮಸ್ಯೆಯಿಲ್ಲ. ಯಾವುದೇ ಜ್ವರ ಇಲ್ಲವಾದರೂ ತನಿಖೆ ವೇಳೆ ನಾಟಕ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಆತನಿಗೆ ಖಾಕಿ ಸ್ಟೈಲ್ ನಲ್ಲಿ ಡ್ರಿಲ್ ಶುರು ಮಾಡಿದ್ದಾರೆ.