ರಾಮನಗರ: ಖತರ್ನಾಕ್ ಕಳ್ಳರ ತಂಡವೊಂದು ದೇವಾಲಯದಲ್ಲಿ ಹುಂಡಿಯ ಜೊತೆ ಬೆಳ್ಳಿ ತಟ್ಟೆ, ಸಿಸಿಟಿವಿಯನ್ನು ಕದ್ದಿರುವ ಘಟನೆ ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಲಿಕೆರೆ ಯಲ್ಲಿ ನಡೆದಿದೆ.
ಹೊಸ ವರ್ಷದ ಬಳಿಕ ಹುಂಡಿಯಲ್ಲಿ ಹೆಚ್ಚು ಹಣ ಇರುತ್ತದೆಂಬ ಕಾರಣಕ್ಕೆ ದೇವಾಲಯದಲ್ಲಿ ಕಳವು ಮಾಡಲಾಗಿದೆ. ಏಣಿ ಮೂಲಕ ದೇವಾಲಯ ಪ್ರವೇಶಿಸಿರುವ ಇಬ್ಬರು ಕಳ್ಳರು ಅಪರಿಚಿತರಾಗಿದ್ದು, ಸಿಸಿಟಿವಿಯಲ್ಲಿ ಕೃತ್ಯ ದಾಖಲಾಗುತ್ತಿದೆ ಎಂಬ ಕಾರಣಕ್ಕೆ ಟಿವಿ ಕೂಡ ಕದ್ದೋಯ್ದಿದ್ದಾರೆ. ಆದರೆ ಡಿವಿಆರ್ ದೇವಾಲಯದಲ್ಲೆ ಇದ್ದು ಕಳ್ಳರ ಕೈಚಳಕ ದಾಖಲಾಗಿದೆ. ಮೊದಲು ಮರಳ ಸಿದ್ದೇಶ್ವರ ದೇವಾಲಯದಲ್ಲಿ ಕಳವು ಮಾಡಿದ ಕಳ್ಳರು ಅದೇ ಗ್ರಾಮದಲ್ಲಿರುವ ಶಿವಲಿಂಗ ದೇವಾಲಯದಲ್ಲಿಯೂ ಕಳವು ಮಾಡಿದ್ದಾರೆ. ಒಂದೇ ಗ್ರಾಮದಲ್ಲಿ ಸರಣಿ ಕಳ್ಳತನವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.