ಬಾಗಲಕೋಟೆ : ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ವಿಠ್ಠಲ ಮನಗೂಳಿ ಕೊಲೆ ಆರೋಪಿ. 22 ವರ್ಷದ ಪತ್ನಿ ರಂಜಿತಾ, 50 ವರ್ಷದ ರೇಣವ್ವ ಕೊಲೆಗೀಡಾದವರು. ಆಸ್ತಿ ಹಾಗೂ ವರದಕ್ಷಿಣೆ ನೀಡದ ಹಿನ್ನೆಲೆ ಕೊಲೆ ಮಾಡಿದ್ದಾಗಿ ಮೃತರ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಗುಳೇದಗುಡ್ಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣದ ಹಿನ್ನೆಲೆ
ಒಂದು ವರ್ಷದ ಹಿಂದೆ ಆರೋಪಿ ವಿಠ್ಠಲ ಹಾಗೂ ರಂಜಿತಾಗೆ ಮದುವೆಯಾಗಿತ್ತು. ವಾರದ ಹಿಂದೆ ರಂಜಿತಾ ಜಗಳವಾಗಿ ತವರಿಗೆ ಹೋಗಿದ್ದಳು. ಆದ್ರೆ ಎರಡು ದಿನದ ಹಿಂದೆ ಗಂಡನ ಮನೆಗೆ ತಾಯಿ ಸಮೇತ ವಾಪಸ್ಸಾಗಿದ್ದಳು. ನಿನ್ನೆ ಪುನಃ ಜಗಳ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.