ಬಲರಾಂಪುರ: ಛತ್ತೀಸ್ಗಢದ ಬಲರಾಂಪುರ ಜಿಲ್ಲೆಯಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಮೂವರು ಗಣಿ ಕಾರ್ಮಿಕರನ್ನು ಪತ್ತೆ ಹಚ್ಚಲು ಇಲ್ಲಿನ ಸಮ್ರಿಪಾತ್ ಪ್ರದೇಶದಲ್ಲಿ ತನಿಖೆ ನಡೆಯುತ್ತಿದೆ.
ಮೂವರು ಗಣಿ ಕಾರ್ಮಿಕರ ಅಪಹರಣದ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈ ಬಗ್ಗೆ ಅವರ ಕುಟುಂಬಸ್ಥರಿಂದ ಯಾವುದೇ ದೂರು ದಾಖಲಾಗಿಲ್ಲವಾದರೂ ಗಣಿ ಕಾರ್ಮಿಕರನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ. ಪೊಲೀಸರು ಮತ್ತು ಸಿಆರ್ಪಿಎಫ್ನ ಗಸ್ತು ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಅವರನ್ನು ರಕ್ಷಣೆ ಮಾಡಲಾಗುವುದು ಎಂದು ಬಲರಾಂಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಕಟ್ಲಂ ತಿಳಿಸಿದ್ದಾರೆ.
ಓದಿ: ಅಪ್ರಚೋದಿತ ಗುಂಡಿನ ದಾಳಿ: ಐವರು ಪಾಕ್ ಸೈನಿಕರನ್ನು ಬೇಟೆಯಾಡಿದ ಯೋಧರು
ಅಪಹರಣದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸುವಂತಿಲ್ಲ ಎಂದು ನಮಗೆ ಬೆದರಿಕೆ ಹಾಕಲಾಗಿದೆ ಎಂದು ಅಪಹರಣಕ್ಕೊಳಗಾದ ಕಾರ್ಮಿಕನೋರ್ವನ ಸಂಬಂಧಿಕರೊಬ್ಬರು ಹೇಳಿದ್ದಾರೆ.
ಮಧ್ಯರಾತ್ರಿ ನಕ್ಸಲರು ಬಂದು ನಮ್ಮ ಬಾಗಿಲು ತೆರೆಯಲು ಪ್ರಯತ್ನಿಸಿದರು. ಬಳಿಕ ಕಿಟಕಿ ಮೂಲಕ ಒಳಗೆ ಪ್ರವೇಶಿಸಿ ನನ್ನ ಪತಿಯನ್ನು ಥಳಿಸಿ ಕರೆದೊಯ್ದರು. ನಾವೆಷ್ಟೇ ಮನವಿ ಮಾಡಿದರೂ ಅವರು ನಮ್ಮ ಮಾತು ಕೇಳಲಿಲ್ಲ. ಅಲ್ಲದೇ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿ ಹೋದರು ಎಂದು ಅಪಹರಣಕ್ಕೊಳಗಾದ ಕಾರ್ಮಿಕನೋರ್ವನ ಪತ್ನಿ ಹೇಳಿದ್ದಾರೆ.