ಬಾಗಲಕೋಟೆ : ವ್ಯಕ್ತಿಯೊಬ್ಬರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚಲು ನಡೆಸಿದ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಕಡಲೆ ಬೀಜ ಮಹತ್ವದ ಸುಳಿವು ನೀಡಿದೆ. ಈ ಮೂಲಕ ಆರೋಪಿಗಳನ್ನು ಜಮಖಂಡಿ ಪೊಲೀಸರು ಬಂಧಿಸಿದ್ದಾರೆ.
ತುಕ್ಕಪ್ಪ ರೇವಣ್ಣವರ ಅವರನ್ನು ಆರೋಪಿಗಳು ಹಗ್ಗದಿಂದ ಕತ್ತು ಬಿಗಿದು, ಕಲ್ಲಿನಿಂದ ಜಜ್ಜಿ ಜಮಖಂಡಿ ತಾಲೂಕಿನ ಕುಂಚನೂರು ಪುನರ್ವಸತಿ ಕೇಂದ್ರದಲ್ಲಿ ಕೊಲೆ ಮಾಡಿ, ಸಾಕ್ಷ್ಯ ನಾಶಗೊಳಿಸಿ ಪರಾರಿಯಾಗಿದ್ದರು. ಆರೋಪಿಗಳನ್ನು ಪತ್ತೆಹಚ್ಚೋದು ಪೊಲೀಸರಿಗೆ ಸಾಹಸದ ಕೆಲಸವಾಗಿತ್ತು. ಕೊಲೆ ಮಾಡುವ ಮೊದಲು ಆರೋಪಿಗಳು ಮತ್ತು ಮೃತ ವ್ಯಕ್ತಿಯ ಬಾರ್ನಲ್ಲಿ ಮದ್ಯಸೇವನೆ ಮಾಡಿ, ಕಡಲೆ ಕಾಳುಗಳನ್ನು ತಿಂದಿದ್ದರು. ತಿಂದು ಉಳಿದ ಕಡಲೆ ಬೀಜವನ್ನು ಜೇಬಿನಲ್ಲಿ ತುಕ್ಕಪ್ಪ ಇಟ್ಟುಕೊಂಡಿದ್ದ. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಮೃತನ ಜೇಬಿನಲ್ಲಿ ಕಡಲೆಕಾಳು ಪತ್ತೆಯಾಗಿದೆ. ನಂತರ ಪೊಲೀಸರು ಕಡಲೆಕಾಳು ಕೊಡುವ ಬಾರ್ಅನ್ನು ಪೊಲೀಸರು ಹುಡುಕಿದ್ದು, ಬಾರ್ನ ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಜ.14 ಸಂಕ್ರಾಂತಿಯ ದಿವಸದಂದು ಆಸ್ತಿ ವಿಚಾರವಾಗಿ ತುಕ್ಕಪ್ಪ ರೇವಣ್ಣವರ (34) ಎಂಬಾತ ಕೊಲೆಯಾಗಿದ್ದ. ಈ ಕುರಿತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗೆ ಅವನ ಚಿಕ್ಕಪ್ಪ ಕರೆಪ್ಪ ಸುಪಾರಿ ಕೊಟ್ಟಿದ್ದನಂತೆ. ಕೊಲೆಯಾದವನು ಹಾಗೂ ಸುಪಾರಿ ನೀಡಿದ ಇಬ್ಬರೂ ಮುಂಡಗನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗ್ರಾಮ ಧರ್ಮಣ್ಣ ಗುಡದಾರ (55), ವಿಠ್ಠಲ ಬಬಲೇಶ್ವರ ಕೊಲೆಗೈದ ಆರೋಪಿಗಳು ಎಂದು ತಿಳಿದು ಬಂದಿದೆ.