ಮುಂಬೈ: ಅತ್ಯಾಚಾರ ಹಾಗೂ ಬೆದರಿಕೆ ಆರೋಪದಡಿ ಬಾಲಿವುಡ್ ನಟ, ರಾಜ್ಯಸಭಾ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ ಚಕ್ರವರ್ತಿ (ಮಿಮೋ) ಹಾಗೂ ಮಿಥುನ್ ಚಕ್ರವರ್ತಿ ಪತ್ನಿ, ನಟಿ ಯೋಗಿತಾ ಬಾಲಿ ವಿರುದ್ಧ ಮುಂಬೈನ ಓಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಮೋ ಎಂದು ಪ್ರಸಿದ್ಧರಾಗಿರುವ ನಟ ಮಹಾಕ್ಷಯ ಚಕ್ರವರ್ತಿ ವಿರುದ್ಧ ಮಾಡೆಲ್ವೊಬ್ಬರು ಪ್ರಕರಣ ದಾಖಲಿಸಿದ್ದಾರೆ. 2015ರಿಂದ ಮಹಾಕ್ಷಯ ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಬಲವಂತವಾಗಿ ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದು, ಮದುವೆಯಾಗಿ ನಂಬಿಸಿ ಮೋಸ ಮಾಡಿದ್ದಾರೆ. ನಾನು ಗರ್ಭಿಣಿಯಾಗಿದ್ದಾಗ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ನಾನು ಒಪ್ಪಿಕೊಳ್ಳದಿದ್ದಾಗ ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
2018ರಲ್ಲಿ ಮಹಾಕ್ಷಯ ಕಿರುತರೆ ನಟಿಯೊಂದಿಗೆ ವಿವಾಹವಾಗಿದ್ದು, ಇದರಿಂದ ನೊಂದ ಮಾಡೆಲ್ ಮಹಾಕ್ಷಯ ವಿರುದ್ಧ ದೂರು ನೀಡಿದ್ದರು. ಪೊಲೀಸರು ಕೂಡ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಮಿಥುನ್ ಚಕ್ರವರ್ತಿ ಅವರ ಪತ್ನಿ ಯೋಗಿತಾ ಬಾಲಿ ದೂರು ಹಿಂಪಡೆದುಕೊಳ್ಳುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿರುವುದಾಗಿ ಕೂಡ ಮಾಡೆಲ್ ಆರೋಪಿಸಿದ್ದಾರೆ.
ಬಳಿಕ ಸಂತ್ರಸ್ತೆ ಈ ಸಂಬಂಧ ಎಫ್ಐಆರ್ ದಾಖಲಿಸುವಂತೆ ಕೋರಿ ದೆಹಲಿಯ ರೋಹಿಣಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರೈಮಾ ಫೇಸಿ (ಪ್ರಾಥಮಿಕ) ಸಾಕ್ಷ್ಯದ ಆಧಾರದ ಮೇಲೆ ಮಹಾಕ್ಷಯ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಇದೀಗ ಆದೇಶ ನೀಡಿದೆ.
ಜಿಮ್ಮಿ, ಹಾಂಟೆಡ್, ಎನಿಮಿ ಸೇರಿದಂತೆ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಮಹಾಕ್ಷಯ ಚಕ್ರವರ್ತಿ ನಟಿಸಿದ್ದಾರೆ.