ಮಂಗಳೂರು: ನಗರದ ಕಸ್ಬಾ ಬೇಂಗ್ರೆಯಲ್ಲಿ ಮನೆಗೆ ನುಗ್ಗಿ ಕಳವುಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ತಣ್ಣೀರುಬಾವಿ ಬ್ಯಾರಿಕೇಡ್ ಚೆಕ್ ಪಾಯಿಂಟ್ ಬಳಿ ಬುಧವಾರ ಸಂಜೆ ಬಂಧಿಸಿದ್ದಾರೆ.
ಕಸ್ಬಾ ಬೇಂಗ್ರೆಯ ನಿವಾಸಿಗಳಾದ ತೌಹೀದ್ ಖಾದರ್ ಅಲಿಯಾಸ್ ತೋಯಿ(18) ಹಾಗೂ ಮೊಹಮ್ಮದ್ ಅಫ್ರಿದ್ ಅಲಿಯಾಸ್ ಅಪ್ಪಿ(22) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ:
ಪಣಂಬೂರು ಠಾಣಾ ವ್ಯಾಪ್ತಿಯ ಕಸ್ಬಾ ಬೇಂಗ್ರೆಯ ರುಕಿಯಾ ಬಾನು ಎಂಬವರ ಮನೆಗೆ ಸೆ.16ರಂದು ತಡರಾತ್ರಿ 2 ಗಂಟೆ ಸುಮಾರಿಗೆ ನುಗ್ಗಿದ ಆರೋಪಿಗಳು ಚಿನ್ನದ ಒಡವೆಗಳನ್ನು ಕಳವುಗೈದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬುಧವಾರ ಸಂಜೆ ಆರೋಪಿಗಳಾದ ತೌಹೀದ್ ಖಾದರ್ ಹಾಗೂ ಮೊಹಮ್ಮದ್ ಅಫ್ರಿದ್ ಸ್ಕೂಟರ್ ನಲ್ಲಿ ತಣ್ಣೀರುಬಾವಿ ಬ್ಯಾರಿಕೇಡ್ ಚೆಕ್ ಪಾಯಿಂಟ್ ಬಳಿ ಬರುತ್ತಿರುವಾಗ ಪೊಲೀಸರು ತಡೆದಿದ್ದಾರೆ. ಆದರೆ ಆರೋಪಿಗಳು ಸ್ಕೂಟರ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ತಕ್ಷಣ ಇಬ್ಬರನ್ನು ಹಿಡಿದು ವಿಚಾರಿಸಿದಾಗ ಕಳವು ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಈ ಸಂದರ್ಭ ಪೊಲೀಸರು ಆರೋಪಿಗಳು ಕಳವುಗೈದ 13 ಸಾವಿರ ರೂ. ಮೌಲ್ಯದ ಚಿನ್ನದ ಒಡವೆ, 2 ಸಾವಿರ ರೂ.ಮೌಲ್ಯದ ಮೊಬೈಲ್ ಫೋನ್, 3 ಸಾವಿರ ರೂ. ನಗದು ಹಾಗೂ ಆರೋಪಿಗಳು ಉಪಯೋಗಿಸುತ್ತಿದ್ದ 50 ಸಾವಿರ ರೂ. ಮೌಲ್ಯದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.