ಬಂದಾ (ಉತ್ತರ ಪ್ರದೇಶ): 2018ರ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಸಂಬಂಧ ಇದೀಗ ಅಪರಾಧಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018ರ ಜನವರಿ 31 ರಂದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಭೀಕರ ಕೊಲೆ ನಡೆದಿತ್ತು. ತಂದೆ - ತಾಯಿ ಹಾಗೂ ಅವರ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಸಾಯಿಸಲಾಗಿತ್ತು. ಮಹಾದೇವ್, ಅವರ ಪತ್ನಿ ಚುನ್ನಿ ಮತ್ತು ಮಕ್ಕಳಾದ ಪವನ್ ಮತ್ತು ರಾಜ್‌ಕುಮಾರ್ ಮೃತ ದುರ್ದೈವಿಗಳು. ದಂಪತಿಯ 8 ವರ್ಷದ ಮಗಳ ಮುಂದೆಯೇ ಈ ದುರ್ಘಟನೆ ನಡೆದಿತ್ತು.
ಈ ಸಂಬಂಧ ಪ್ರಮುಖ ಆರೋಪಿ ಅಮಿತ್ ಜೊತೆ ಆತನ ತಾಯಿ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದರು. ತನ್ನ ಅತ್ತಿಗೆಯೊಂದಿಗೆ ಮಹಾದೇವ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಅಮಿತ್ ಈ ಕೃತ್ಯ ಎಸಗಿದ್ದನು. ಅಮಿತ್ ಅಪರಾಧಿ ಎಂಬುದೂ ಸಾಬೀತಾಗಿತ್ತು.
ಅಪರಾಧಿಗೆ ಶಿಕ್ಷೆ ಪ್ರಮಾಣ ವಿಧಿಸುವ ಕುರಿತು ಶುಕ್ರವಾರ ವಿಚಾರಣೆ ನಡೆಸಿದ್ದ ಬಂಡಾ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಇನ್ನಿಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.