ವಿಜಯವಾಡ (ಆಂಧ್ರಪ್ರದೇಶ): ಕಿರುಕುಳ ನೀಡುತ್ತಿದ್ದ ಕಾರಣಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ ಮಹಿಳಾ ನರ್ಸ್ ಒಬ್ಬಳ ಮೇಲೆ ವ್ಯಕ್ತಿ ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ್ದಾನೆ. ಇಂತಹ ಭೀಕರ ಕೃತ್ಯ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.
ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವತಿಯನ್ನ ಈತ ಪ್ರೀತಿಸುತ್ತಿದ್ದನಂತೆ. ಆದರೆ ಇದಕ್ಕೆ ನಿರಾಕರಣೆ ಮಾಡಿರುವ ಜತೆಗೆ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲು ಮಾಡಿದ್ದಳು. ಠಾಣೆಗೆ ಕರೆಯಿಸಿ ಪೊಲೀಸರು ಬುದ್ಧಿವಾದ ಹೇಳಿದ್ದರಿಂದ ತಾನು ಆ ರೀತಿಯಾಗಿ ಇನ್ಮುಂದೆ ನಡೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದನು. ಹೀಗಾಗಿ ಯುವತಿ ಪ್ರಕರಣ ವಾಪಸ್ ಪಡೆದುಕೊಂಡಿದ್ದಳು.
ಘಟನೆ ಸಂಪೂರ್ಣ ಮಾಹಿತಿ
ಕೃಷ್ಣ ಜಿಲ್ಲೆಯ ಚಿನ್ನಾರಿ ವಿಜಯವಾಡದ ಕೋವಿಡ್ ಕೇರ್ ಸೆಂಟರ್ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ಆಸ್ಪತ್ರೆ ಪಕ್ಕದಲೇ ಇತರ ಸ್ನೇಹಿತರೊಂದಿಗೆ ರೂಮ್ನಲ್ಲಿ ವಾಸವಾಗಿದ್ದಳು. ಶ್ರೀರಾಮ್ಪುರಂದ ನಾಗಭೂಷಣಂ ಎಂಬ ವ್ಯಕ್ತಿ ಆಕೆಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡ್ತಿದ್ದನು. ಹೀಗಾಗಿ ಆಕೆ ಗವರ್ನರ್ ಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು.
ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದ ಬಳಿಕ ನಿನ್ನೆ ರಾತ್ರಿ 8ಗಂಟೆಗೆ ಡ್ಯೂಟಿ ಮುಗಿಸಿಕೊಂಡು ಬರುತ್ತಿದ್ದ ಚಿನ್ನಾರಿ ಜತೆ ಮಾತುಕತೆ ನಡೆಸಲು ಮುಂದಾಗಿದ್ದು. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ನಾಗಭೂಷಣಂ ಮಹಿಳಾ ನರ್ಸ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನು ಘಟನೆ ವೇಳೆ ಆತನಿಗೂ ಬೆಂಕಿ ತಗುಲಿದೆ. ಪರಿಣಾಮ ಗಾಯಗೊಂಡಿದ್ದಾನೆ.
ಆತನನ್ನು ವಿಜಯವಾಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆತನ ಸ್ಥಿತಿ ಗಂಭೀರವಾಗಿರುವ ಕಾರಣ ಗುಂಟೂರು ಜೆಜೆಹೆಚ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.