ಮಂಡ್ಯ: ತನ್ನ ಮದುವೆ ಖರ್ಚಿಗಾಗಿ ದರೋಡೆ ಹಾದಿ ಹಿಡಿದ ಯುವಕನೊಬ್ಬ, ವಿವಾಹ ಬಂಧನಕ್ಕೊಳಗಾಗುವುದಕ್ಕೂ ಮುನ್ನ ಪೊಲೀಸರ ಅತಿಥಿಯಾಗಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.
ಕಳೆದ ಭಾನುವಾರವಷ್ಟೇ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಮದುವೆ ಆಗಬೇಕಾಗಿದ್ದ ಕಳ್ಳನನ್ನು ಬಂಧಿಸಿದ ಪಾಂಡವಪುರ ಪೊಲೀಸರು, ಯುವತಿಯನ್ನು ರಕ್ಷಿಸುವ ಮೂಲಕ ಆಕೆಯ ಭವಿಷ್ಯ ಉಳಿಸಿದ್ದಾರೆ. ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾದ ಮೈಸೂರು ಮೂಲದ ನವಾಜ್ ಎಂಬಾತನನ್ನು ಬಂಧಿಸಿ, ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈತನ ಜೊತೆ ಆತನ ಸಹಚರರಾದ ಆರು ಮಂದಿಯನ್ನು ಬಂಧಿಸಿ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ನವಾಜ್, ಮದುವೆ ಖರ್ಚಿಗಾಗಿ ದರೋಡೆಗೆ ಇಳಿದಿದ್ದ ಎನ್ನಲಾಗಿದೆ. ವಧುವಿಗೆ ಆಭರಣ ಹಾಗೂ ಮದುವೆ ಖರ್ಚಿಗಾಗಿ ದರೋಡೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಂದ ಬೇಬಿ ಬೆಟ್ಟದ ಕ್ರಷರ್ಗಳ ಮೇಲೆ ದಾಳಿ ಮಾಡಿ ನಗದು ದೋಚಿದ್ದ ಪ್ರಕರಣ, ಚಿನಕುರಳಿಯ ಚಿನ್ನದ ವ್ಯಾಪಾರಿ ಬಳಿ ದರೋಡೆ ಮಾಡಿದ್ದ ನಗದು ಸೇರಿದಂತೆ 60 ಗ್ರಾಂ ಚಿನ್ನಾಭರವಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.