ಮೆಹಬೂಬಬಾದ್ (ತೆಲಂಗಾಣ): ಪ್ರೇಮ ಪ್ರಕರಣ ಪೋಷಕರಿಗೆ ಗೊತ್ತಾಗಿರುವ ಬಗ್ಗೆ ಆತಂಕಗೊಂಡು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮತ್ತು ಪದವಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗಾರ್ಲಾ ಮಂಡಲ್ನ ವಾಡ್ಲಾ ತಾಂಡದಲ್ಲಿ ಈ ಘಟನೆ ನಡೆದಿದೆ.
ಪ್ರಶಾಂತ್ (17) ಮತ್ತು ಪ್ರವೀಣಾ (21) ಮೃತರು. ಖಮ್ಮಂ ಜಿಲ್ಲೆಯ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಪ್ರಶಾಂತ್ ಮತ್ತು ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣಾ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ರಹಸ್ಯವಾಗಿ ಉಳಿದಿದ್ದ ಇವರ ಪ್ರೀತಿಯ ವಿಷಯ ಪೋಷಕರಿಗೆ ಗೊತ್ತಾದ ಕಾರಣ, ಭೀತಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಹೀಗಾಗಿ, ಸೋಮವಾರ ರಾತ್ರಿ ಮನೆಯಿಂದ ಪ್ರೇಮಿಗಳು ತಾಂಡಾದ ಕೃಷಿ ಭೂಮಿಯಲ್ಲಿದ್ದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡರು.
ಮಂಗಳವಾರ ಮುಂಜಾನೆ ಬಾವಿಯಲ್ಲಿ ಮೃತದೇಹಗಳನ್ನು ನೋಡಿದ ರೈತರು ಊರಿನ ಜನರಿಗೆ ವಿಷಯ ಮುಟ್ಟಿಸಿದರು. ಮೃತರ ಗುರುತು ಪತ್ತೆಯಾದ ನಂತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗಾರ್ಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.