ತಿರುವನಂತಪುರಂ: ಕೂಲಿ ಕಾರ್ಮಿಕನೊಬ್ಬ ಹಸಿವು ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ನಡೆದಿದೆ.
ಪ್ರಫುಲ್ಲ ಕುಮಾರ್ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸ್ಥಳೀಯ ಕ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 145 ದಿನಗಳಿಂದ ಕಂಪನಿ ಮುಚ್ಚಿದೆ. ಕಂಪನಿ ಪುನರಾರಂಭಿಸುವಂತೆ ಒತ್ತಾಯಿಸಿ ಕಳೆದೊಂದು ತಿಂಗಳಿನಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಹಳಿಯಲ್ಲಿ ಸಿಲುಕಿದ್ದ ವೃದ್ಧನ ಕಾಪಾಡಿದ ಕಾನ್ಸ್ಟೇಬಲ್ - ವಿಡಿಯೋ
ಶುಕ್ರವಾರ ಕೂಡ ಪ್ರಫುಲ್ಲ ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಡುಬಡತನದಲ್ಲಿದ್ದ ಅವರಿಗೆ ಈ ಕೆಲಸವೊಂದೇ ಜೀವನಾಧಾರವಾಗಿತ್ತು. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪ್ರಫುಲ್ಲ ಹಸಿವು ತಾಳಲಾರದೆ ಈ ನಿರ್ಧಾರಕ್ಕೆ ಬಂದಿರಬೇಕೆಂದು ಅವರ ಸಹದ್ಯೋಗಿಗಳು ಹೇಳಿದ್ದಾರೆ.
ಇದೀಗ ಪ್ರಫುಲ್ಲ ಅವರ ಮೃತದೇಹವನ್ನಿಟ್ಟುಕೊಂಡು ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಆಗ್ರಹಿಸಿದ್ದಾರೆ.