ಪಣಜಿ( ಗೋವಾ): ರಾಜ್ಯ ಬಿಜೆಪಿ ವಕ್ತಾರನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪಕ್ಷೇತರ ಶಾಸಕ ರೋಹನ್ ಕೌಂಟೆ ಅವರನ್ನು ಗೋವಾ ಪೊಲೀಸರು ಬುಧವಾರ ರಾತ್ರಿ ಬಂಧಿಸಿ, ಗುರುವಾರ ಬಿಡುಗಡೆಗೊಳಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋವಾ ಬಿಜೆಪಿ ವಕ್ತಾರ ಪ್ರೇಮಾನಂದ್ ಮಹಾಂಬ್ರೆ ಅವರು ಶಾಸಕ ರೋಹನ್ ಕೌಂಟೆ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೊತೆಗೆ ರಾಜ್ಯ ವಿಧಾನಸಭಾ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೂ ದೂರು ನೀಡಿದ್ದರು.
ಕೌಂಟೆ ಅವರನ್ನು ಉತ್ತರ ಗೋವಾ ಜಿಲ್ಲೆಯ ಪೊರ್ವೊರಿಮ್ನಲ್ಲಿರುವ ಅವರ ನಿವಾಸದಿಂದ ಮಧ್ಯರಾತ್ರಿ ಬಂಧಿಸಲಾಗಿತ್ತು. ಗುರುವಾರ ಬೆಳಗ್ಗೆ ಜಾಮೀನಿನ ಮೇಲೆ ಅವರನ್ನ ಬಿಡುಗಡೆ ಮಾಡಲಾಗಿದೆ ಎಂದು ಪೊರ್ವೊರಿಮ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ಎಡ್ವಿನ್ ಕೊಲಾಕೊ ತಿಳಿಸಿದ್ದಾರೆ.
ಶಾಸಕ ರೋಹನ್ ಕೌಂಟೆ ಅವರ ಬಂಧನ ಒಪ್ಪಿಗೆ ಕೋರಿ ಗೋವಾ ಪೊಲೀಸರು ವಿಧಾನಸಭಾ ಸ್ಪೀಕರ್ ಅವರನ್ನು ಸಂಪರ್ಕಿಸಿದ ನಂತರ ಶಾಸಕರನ್ನು ಬಂಧಿಸಲಾಗಿದೆ. ಏಕೆಂದರೆ ಪ್ರಸ್ತುತ ಗೋವಾ ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಸ್ಪೀಕರ್ ಅನುಮತಿ ಅಗತ್ಯವಿದೆ.
ಪಕ್ಷೇತರ ಶಾಸಕ ಕೌಂಟೆ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 ಮತ್ತು 323 ರ ಅಡಿ ಬಂಧಿಸಲಾಗಿತ್ತು.