ನಾಗೌನ್ (ಅಸ್ಸೋಂ): ಯುವಕನೋರ್ವ ದೊಡ್ಡ ಪ್ರಮಾಣದಲ್ಲಿ ಗುಂಪು ಕಟ್ಟಿಕೊಂಡು ಬಂದು ಪೊಲೀಸ್ ಠಾಣೆ ಮೇಲೆಯೇ ದಾಳಿ ನಡೆಸಿರುವ ಘಟನೆ ಅಸ್ಸೋಂನ ನಾಗೌನ್ ಜಿಲ್ಲೆಯಲ್ಲಿ ನಡೆದಿದೆ.
ದಾಖಲೆಗಳಿಲ್ಲದೆ ಟಿವಿಎಸ್ ಸ್ಕೂಟಿ ರೈಡ್ ಮಾಡುತ್ತಿದ್ದ ಚಡ್ಡೆಕ್ ಅಹ್ಮದ್ ಎಂಬ ಯುವಕನನ್ನು ಅಡ್ಡಗಟ್ಟಿದ್ದ ನಾಗೌನ್ನ ಮಾರಿಕ್ಲಾಂಗ್ ಠಾಣಾ ಪೊಲೀಸರು, ಸ್ಕೂಟಿಯನ್ನು ವಶಕ್ಕೆ ಪಡೆದಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡ ಯುವಕ ನಿನ್ನೆ ರಾತ್ರಿ ಗುಂಪು ಕಟ್ಟಿಕೊಂಡು ಬಂದು ಮಾರಿಕ್ಲಾಂಗ್ ಠಾಣೆಗೆ ನುಗ್ಗಿದ್ದಾನೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಠಾಣೆಯಲ್ಲಿದ್ದ ವಾಹನಗಳನ್ನೂ ಹಾನಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.