ಕಲಬುರಗಿ: ಕಲಬುರಗಿಯನ್ನು ಬೆಚ್ಚಿಬೀಳಿಸಿದ್ದ ಟೈಲ್ಸ್ ಉದ್ಯಮಿ ಸುನೀಲ್ ರಂಕಾ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿದ್ದಾಪುರ ಕಾಲೋನಿ ನಿವಾಸಿ ಅಂಬರೀಶ್ ರಾಠೋಡ್, ಶರಣಸಿರಸಗಿ ತಾಂಡಾ ನಿವಾಸಿ ರಾಜಶೇಖರ್ ರಾಠೋಡ್, ವಿಜಯಪುರ ಜಿಲ್ಲೆಯ ಖತಿಜಾಪುರ ಗ್ರಾಮದ ನಿವಾಸಿ ನಾಮದೇವ ಲೋಣಾರಿ ಹಾಗೂ ಹಾರುತಿ ಹಡಿಗಿಲ್ ಗ್ರಾಮದ ಗುಂಡು ರಾಠೋಡ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 27ರಂದು ಸಂಜೆ 7 ಗಂಟೆಗೆ ಗೋದುತಾಯಿ ನಗರದಲ್ಲಿ ರಾಜಸ್ಥಾನ ಮೂಲದ ಸುನೀಲ್ ರಂಕಾ ಎಂಬ ಉದ್ಯಮಿ ಮೇಲೆ ಗುಂಡು ಹಾರಿಸಿ ಕೊಲೆಗೈದು ಆರೋಪಿಗಳು ಪರಾರಿ ಆಗಿದ್ದರು. ಯಾವುದೇ ಸುಳಿವು ಸಿಗದಂತೆ ಎಚ್ಚರಿಕೆಯಿಂದ ಕೊಲೆಗೈದು ಪರಾರಿ ಆಗಿದ್ದ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.
ಗೋಲ್ಡ್ ಪಾಲಿಷ್ಗೂ ಮುನ್ನ ಇರಲಿ ಎಚ್ಚರ! ಚಿನ್ನ ಪಾಲಿಷ್ ಸೋಗಿನಲ್ಲಿ ಆಭರಣ ಕಳವು
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವೊಂದನ್ನು ಪೊಲೀಸರು ರಚಿಸಿದ್ದರು. ಹತ್ಯೆ ನಡೆದ ಪ್ರದೇಶದಲ್ಲಿನ 50ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಹಾಗೂ ಆ ಸಮಯದಲ್ಲಿನ 5 ಸಾವಿರಕ್ಕೂ ಅಧಿಕ ಮೊಬೈಲ್ ಕರೆಯ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಹತ್ಯೆಯಾದ ಸುನೀಲ್ ರಂಕಾ ನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರದ ಹಣವನ್ನು ಸಂಜೆ ಗೋದುತಾಯಿ ನಗರದ ತಮ್ಮ ನಿವಾಸಕ್ಕೆ ಹೊಗುತ್ತಿದ್ದರು. ಟೈಲ್ಸ್ ಅಂಗಡಿಯ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಅಂಬರೀಶ್ ಇದನ್ನು ಗಮನಿಸಿದ್ದ. ಹಣದ ದುರಾಸೆಗೆ ತನ್ನ ಸ್ನೇಹಿತರು ಮತ್ತು ಓರ್ವ ಸಂಬಂಧಿ ಜೊತೆ ಸೇರಿ ಆಗಸ್ಟ್ 27ರಂದು ಉದ್ಯಮಿಯನ್ನು ಹಿಂಬಾಲಿಸಿ ಗೋದುತಾಯಿ ನಗರದಲ್ಲಿ ಹಣದ ಬ್ಯಾಗ್ ಕಸಿದುಕೊಂಡು ಬಳಿಕ ಗುಂಡಿಕ್ಕಿ ಹತ್ಯೆಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ವಿಜಯಪುರಕ್ಕೆ ತೆರಳಿದ ಆರೋಪಿ ಅಂಬರೀಶ್, ತನ್ನ ಸಂಬಂಧಿಕರ ಮನೆಯಲ್ಲಿ ಪಿಸ್ತೂಲ್ ಬಚ್ಚಿಟ್ಟಿದ್ದ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್, 75 ಸಾವಿರ ರೂ. ನಗದು, 4 ಮೊಬೈಲ್ ಅನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪಿಸ್ತೂಲ್ ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳಿಗೆ ಪಿಸ್ತೂಲ್ ಎಲ್ಲಿಂದ ಸಿಕ್ಕಿತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.