ಉಡುಪಿ: ಮುಂಬೈ ಮಾಯಾ ಬಾರ್ ಮಾಲೀಕ ವಶಿಷ್ಟ ಅವರನ್ನು ಕೊಲೆಗೈದ ಅದೇ ಬಾರ್ನ ಸಪ್ಲಯರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಮುಂಬೈ ಉದ್ಯಮಿ ವಶಿಷ್ಟ ಸತ್ಯನಾರಾಯಣ ಯಾದವ್ ಕೊಲೆ ಪ್ರಕರಣವನ್ನ ಭೇದಿಸಿರುವ ಹಿರಿಯಡ್ಕ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ವಶಿಷ್ಟ ಯಾದವ್ ಮಾಲಿಕತ್ವದ ಮಾಯಾ ಡೇ ಲೇಡಿಸ್ ಬಾರ್ ಆಂಡ್ ರೆಸ್ಟೋರೆಂಟ್ ಸಿಬ್ಬಂದಿ, ಮೂಲತಃ ದಿಲ್ಲಿ ನಿವಾಸಿಯಾದ ಸುಮಿತ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಉಡುಪಿಯ ಎಕೆಎಂಎಸ್ ಬಸ್ ಕಂಪನಿಯ ಸಿಬ್ಬಂದಿ ಅಬ್ದುಲ್ ಶಕೂರ್, ಅವಿನಾಶ್ ಕರ್ಕೇರ, ಮಹಮ್ಮದ್ ಶರೀಫ್, ಸುಮಿತ್ ಮಿಶ್ರಾ ಬಂಧಿತ ಆರೋಪಿಗಳು. ಮಾಲೀಕ ವಶಿಷ್ಟ ಸಾಯುವುದಕ್ಕೂ ಮೊದಲು ಪತ್ನಿ ನೀತಾಳಿಗೆ ಕರೆ ಮಾಡಿದ್ದರು. ಕರೆಯಲ್ಲಿ ಸ್ನೇಹಿತ ಸೈಫ್ ಹಾಗೂ ಅಕ್ರಂ ಜೊತೆ ಇರುವುದಾಗಿ ಹೇಳಿದ್ದರು. ವಿಡಿಯೋ ಕರೆಯಲ್ಲೂ ಸಹ ಪತಿ, ಸೈಫ್ ಹಾಗೂ ಅಕ್ರಂ ಜೊತೆ ಇರುವುದನ್ನು ನೋಡಿದ್ದಳು. ಹೀಗಾಗಿ ಮೃತರ ಪತ್ನಿ ನೀತಾ ಯಾದವ್, ಸ್ನೇಹಿತರ ಮೇಲೆ ಸಂಶಯ ವ್ಯಕ್ತಪಡಿಸಿದ್ದು ಪೊಲೀಸರು ಮತ್ತಿಬ್ಬರಿಗಾಗಿ ತನಿಖೆ ನಡೆಸಿದ್ದಾರೆ.
ನ್ಯೂ ಮುಂಬೈಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಮೃತ ವಶಿಷ್ಟ ಉಡುಪಿಗೆ ಆಗಮಿಸಿದ್ದು ಯಾಕೆ?, ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮಕ್ಕೆ ವಶಿಷ್ಟ ತಾನಾಗಿಯೇ ಆಗಮಿಸಿದ್ದಾ? ಅಥವಾ ಆರೋಪಿಗಳೆ ಕೊಂದು ಕುಕ್ಕೆಹಳ್ಳಿಯಲ್ಲಿ ಎಸೆದು ಹೋಗಿದ್ರಾ?, ಕೊಲೆಗೆ ಕಾರಣ ಏನು ಅನ್ನೋದು ಬಹಿರಂಗವಾಗಬೇಕಿದೆ. ತನಿಖೆಗಾಗಿ ಪೊಲೀಸರು ಎರಡು ತಂಡ ರಚನೆ ಮಾಡಿದ್ದಾರೆ.