ಬೆಂಗಳೂರು: ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರು ಕಾರು ಕಳ್ಳರನ್ನು ಕೊನೆಗೂ ತಮಿಳುನಾಡಿನ ತಿರುಚ್ಚಿಯಲ್ಲಿ ಬಂಧಿಸಲಾಗಿದೆ.
ಸದ್ದಾಂಹುಸೇನ್, ಮಾರಿಮುತ್ತು,ನಾಹೂರ್ ಮೀರಾ ಮತ್ತು ಹರಿಕೃಷ್ಣ ಎಂಬುವರು ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚಂದನಲೇಔಟ್ ನಿವಾಸಿ ಕೃಷ್ಣೇಗೌಡ ಮೂರು ತಿಂಗಳ ಹಿಂದೆಮಾರುತಿ ಕಾರ್ ಖರೀದಿಸಿದ್ದರು. ಪಾರ್ಕಿಂಗ್ ಮಾಡಿದ್ದ ಕಾರನ್ನು ಈ ಖದೀಮರು ಎಗರಿಸಿದ್ದರು. ಈ ಹಿನ್ನೆಲೆ ಕೃಷ್ಣೇಗೌಡರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅದೃಷ್ಟವಶಾತ್ ಕಾರಿನಲ್ಲಿ ಜಿಪಿಎಸ್ ಅಳವಡಿಸಲಾಗಿತ್ತು. ಇದರ ಆಧಾರದ ಮೇಲೆ ಕಳ್ಳರನ್ನು ಬೆನ್ನತ್ತಿದ ಪೊಲೀಸರು, ತಮಿಳುನಾಡಿನ ತಿರುಚ್ಚಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷ ಅಂದ್ರೆ ಇವರು ಮಾರುತಿ ಕಾರುಗಳನ್ನೇ ಕದಿಯುತ್ತಿದ್ದರು.
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಹೆಚ್ಚಾಗಿ ತಮಿಳುನಾಡು ಗಡಿ ಭಾಗದ ಆಗ್ನೇಯ ವಿಭಾಗದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಸೂರ್ಯಸಿಟಿ, ಹುಳಿಮಾವು ಠಾಣೆ ವ್ಯಾಪ್ತಿಗಳಲ್ಲಿ ಈ ನಾಲ್ಕು ಜನ ಅಂತರ ರಾಜ್ಯ ಕಾರುಗಳ್ಳರ ವಿರುದ್ಧ 11 ಕೇಸ್ ದಾಖಲಾಗಿದ್ದವು. ಇದೀಗ ಬಂಧಿತರಿಂದ ಸುಮಾರು 30 ಲಕ್ಷ ರೂ. ಬೆಲೆಯ ಮಾರುತಿ, ಎರ್ಟಿಗಾ ಮತ್ತು ಸ್ವಿಫ್ಟ್ ಡಿಜೈರ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.