ಬೆಂಗಳೂರು: ಸಿಗರೇಟು ಇಲ್ಲಾ ಅಂದಿದ್ದಕ್ಕೆ ಬೀಡಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಶಶಿಕುಮಾರ್, ರಾಮಕೃಷ್ಣ, ಗೋವಿಂದರಾಜ್, ರಮೇಶ್ ಹಾಗೂ ವಿನೋದ್ ಕುಮಾರ್ ಬಂಧಿತ ಆರೋಪಿಗಳು. ವಿನೋದ್ ಹಲ್ಲೆಗೆ ಒಳಗಾದವರು. ಮೂಲತಃ ಉತ್ತರ ಪ್ರದೇಶದನಾಗಿದ್ದು ಹಲವು ವರ್ಷಗಳಿಂದ ಬೀಡಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಕೊರೊನಾ ಕಾರಣಕ್ಕಾಗಿ ಸಿಗರೇಟು ಮಾರಾಟ ನಿಷೇಧವಿದ್ದರೂ ಇದೇ ತಿಂಗಳು 10 ರಂದು ದೊಡ್ಡಬೊಮ್ಮಸಂದ್ರದ ಬಳಿಯ ಬೀಡಾ ಅಂಗಡಿಗೆ ಹೋಗಿ 20 ಪ್ಯಾಕ್ ಸಿಗರೇಟು ಕೊಡುವಂತೆ ಕುಡಿದ ಅಮಲಿನಲ್ಲಿ ಆರೋಪಿಗಳು ಕೇಳಿದ್ದಾರೆ. ವಿನೋದ್ ಸಿಗರೇಟು ಇಲ್ಲಾ ಎಂದಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಮಚ್ಚುಗಳಿಂದ ವಿನೋದ್ನ ತಲೆ ಹಾಗೂ ಕೈಗಳಿಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಇನ್ಸ್ಪೆಕ್ಟರ್ ಟಿ.ಎಲ್. ಪ್ರವೀಣ್ ಕುಮಾರ್ ನೇತೃತ್ವದ ತಂಡವು ನಾಪತ್ತೆಯಾಗಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.