ಬರೇಲಿ (ಉತ್ತರ ಪ್ರದೇಶ): ಕಾನೂನು ಬಾಹಿರ ಮತಾಂತರ ಅಥವಾ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ನಿನ್ನೆ ಅಲ್ಲಿನ ರಾಜ್ಯಪಾಲರು ಸಹಿಹಾಕಿದ್ದು, ಇಂದು ಮೊಟ್ಟ ಮೊದಲ ಕೇಸ್ ದಾಖಲಾಗಿದೆ.
ಉತ್ತರ ಪ್ರದೇಶದ ಬರೇಲಿಯ ಡಿಯೋರೇನಿಯಾ ಪೊಲೀಸ್ ಠಾಣೆಯಲ್ಲಿ ನೂತನ 'ಮತಾಂತರ ನಿಷೇಧ 2020' ಕಾನೂನಿನಡಿ ಮೊದಲ ಎಫ್ಐಆರ್ ದಾಖಲಿಸಲಾಗಿದೆ. ತನ್ನ ಧರ್ಮವನ್ನು ಪರಿವರ್ತನೆಗೊಳಿಸುವಂತೆ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಒತ್ತಡ ಹೇರಿದ್ದು, ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಂಡಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನವೆಂಬರ್ 24 ರಂದು 'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಲವ್ ಜಿಹಾದ್ ಎಂಬುದು ಕಾನೂನು ಬಾಹಿರ ಮತಾಂತರ ಎಂದು ಈ ಸುಗ್ರೀವಾಜ್ಞೆಯಲ್ಲಿ ಘೋಷಿಸಲಾಗಿತ್ತು. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ನಿನ್ನೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದರು.
ಈ ಹೊಸ ಕಾನೂನಿನಡಿ ಕೇವಲ ವಿವಾಹಕ್ಕೋಸ್ಕರ ಬಲವಂತದ ಮತಾಂತರ ನಡೆಸಿದ ಆರೋಪಿಗಳಿಗೆ 15 ಸಾವಿರ ರೂ.ಗಳ ದಂಡದೊಂದಿಗೆ 1-5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಎಸ್‌ಸಿ / ಎಸ್‌ಟಿ ಸಮುದಾಯದ ಅಪ್ರಾಪ್ತರು ಮತ್ತು ಮಹಿಳೆಯರ ಮತಾಂತರಕ್ಕೆ 25 ಸಾವಿರ ರೂ.ಗಳ ದಂಡದೊಂದಿಗೆ 3-10 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.