ತಿರುವನಂತಪುರಂ (ಕೇರಳ): ಇಲ್ಲಿನ ಶ್ರೀಕಾರ್ಯಂ ಇಡವಕ್ಕೊಣಂನಲ್ಲಿರುವ ಖಾಸಗಿ ಶಾಲೆಯೊಂದರ ಬಸ್ ಚಾಲಕನನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ನೊಂದ ಚಾಲಕ ಶಾಲೆಯ ಆವರಣದ ಬಳಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಟ್ಟಪ್ಪಾರಾ ನಿವಾಸಿ ಶ್ರೀಕುಮಾರ್ ಮೃತ ವ್ಯಕ್ತಿ. ಲಾಕ್ಡೌನ್ ವೇಳೆಯಲ್ಲಿ 86 ಮಂದಿ ಸಿಬ್ಬಂದಿಯನ್ನು ಶಾಲಾ ಆಡಳಿತ ಮಂಡಳಿ ವಜಾ ಮಾಡಿತ್ತು. ಇಂದು ಬೆಳಗ್ಗೆ ಸಹ ಶಾಲೆಗೆ ಹೋದ ಆತನಿಗೆ ಕೆಲಸಕ್ಕೆ ಬರುವುದು ಬೇಡವೆಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಶಾಲೆಯ ಬಳಿ ನಿಲ್ಲಿಸಿದ್ದ ಆಟೋರಿಕ್ಷಾ ಮೇಲೆ ಪೆಟ್ರೋಲ್ ಸುರಿದು, ಆಟೋ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡಿದ್ದಾನೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನ ವಿರೋಧಿಸಿ ರಾಜೀನಾಮೆಗೆ ಮುಂದಾದ ಲೋಕದಳ ಶಾಸಕ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಶ್ರೀಕುಮಾರ್ ಸಂಪೂರ್ಣ ಸುಟ್ಟುಹೋಗಿದ್ದರು. ಸಾವಿಗೂ ಮುನ್ನ ಡೆತ್ನೋಟ್ ಬರೆದಿದ್ದ ಶ್ರೀಕುಮಾರ್, ಪತ್ರವನ್ನು ತನ್ನ ಸಹೋದ್ಯೋಗಿ ಒಬ್ಬರಿಗೆ ನೀಡಿದ್ದರಂತೆ. ಕೆಲಸ ಕಳೆದುಕೊಂಡ ಎಲ್ಲ ಸಿಬ್ಬಂದಿ ಈಗ ಶಾಲೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.