ಬೆಂಗಳೂರು: ಫೇಸ್ಬುಕ್ ನಲ್ಲಿ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆನ್ನಲಾದ ಆರೋಪಿ ನವೀನ್ ಕುಮಾರ್ ಅವರನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ.
ಆದರೆ ಡಿ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಬಳಿ ಇರುವ ನವೀನ್ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನವೀನ್ ಕುಮಾರ್ ಮನೆಯಲ್ಲಿ ಅವರ ತಂದೆ-ತಾಯಿ ಸೇರಿದಂತೆ ಸುಮಾರು 12ಜನ ವಾಸವಿದ್ದು, ಕಿಡಿಗೇಡಿಗಳು ದಾಳಿ ಮಾಡಿ ಮನೆಯನ್ನು ಸಂಪೂರ್ಣ ಜಖಂ ಮಾಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಹೋದರಿ ಜಯಂತಿ ಅವರು ನವೀನ್ ತಾಯಿಯಾಗಿದ್ದು, ಅವರು 'ಈಟಿವಿ ಭಾರತ'ದೊಂದಿಗೆ ನಿನ್ನೆ ನಡೆದ ಘಟನಾವಳಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನನ್ನ ಅಣ್ಣಾನಾಗಿದ್ದು, ಅವನ ಮೇಲಿನ ದ್ವೇಷವನ್ನು ನನ್ನ ಮಗನ ಮೇಲೆ ತೋರಿಸಿದ್ದಾರೆ. ಮುಂಬರುವ ಎಲೆಕ್ಷನ್ ಗೆ ನಿಲ್ಲುವ ವಿಚಾರವಾಗಿ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆದರೆ ಕೃತ್ಯ ಮಾಡಿದವರು ಯಾರೂ ಪರಿಚಿತರಲ್ಲ. ಯಾರೋ ಬೇಕು ಅಂತಲೇ ಬೇರೆಡೆಯಿಂದ ಬಂದು ಇಂತಹ ಕೃತ್ಯ ಎಸಗಿದ್ದಾರೆ. ಘಟನೆ ನಡೆದಾಗ ನನ್ನನ್ನು ಸ್ಥಳೀಯ ಮುಸ್ಲಿಂ ಯುವಕರೇ ರಕ್ಷಿಸಿದರು ಎಂದು ಘಟನೆ ನೆನೆದು ಜಯಂತಿ ಕಣ್ಣೀರು ಹಾಕಿದರು.