ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆದ ಯುವಕನನ್ನು ಹುಣಸೂರು ಪಟ್ಟಣ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹುಣಸೂರಿನ ಬಜಾರ್ ರಸ್ತೆಯ ಎ.ನಿಜಾಮ್ ಮೊಹಲ್ಲಾ ನಿವಾಸಿ ರಮೀಜ್ ಉಲ್ಲಾ ಖಾನ್ (23) ಬಂಧಿತ ಆರೋಪಿ.
ಈತ 2011ರಲ್ಲಿ ತನ್ನ ಜನ್ಮ ದಿನಾಂಕ ಹಾಗೂ ಹುಣಸೂರಿನ ಉರ್ದು ಶಾಲೆಯಲ್ಲಿ ವ್ಯಾಸಂಗ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದ. ಬಳಿಕ ನವೀಕರಣದ ವೇಳೆ ಸಿಕ್ಕಿಬಿದ್ದಿದ್ದ. ಬಳಿಕ ಆತನ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿತ್ತು.
ತದ ನಂತರ ಮತ್ತೆ ಅಸಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಹೊಸದಾಗಿ ಪಾಸ್‌ಪೋರ್ಟ್ ಪಡೆದಿದ್ದಾನೆ. ಈ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳು ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದು ಸರ್ಕಾರಕ್ಕೆ ವಂಚಿಸಿದ್ದಾನೆ ಎಂದು ಹುಣಸೂರು ಪಟ್ಟಣ ಠಾಣೆಗೆ ದೂರು ನೀಡಿದ್ದರು.